ಮಂಗಳೂರು ವಿವಿ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ
ಮಂಗಳೂರು, ಜೂ.2: ನಗರದ ಹೃದಯ ಭಾಗವಾಗಿರುವ ಹಂಪನಕಟ್ಟೆಯಲ್ಲಿ 2016-17ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭಿಸಲ್ಪಟ್ಟ ಮಂಗಳೂರು ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜು ಕೌಟುಂಬಿಕ ಜವಾಬ್ದಾರಿ, ಆರ್ಥಿಕ ಸಂಕಷ್ಟಗಳಂತಹ ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸವನ್ನು ಪದವಿ ಹಂತದಲ್ಲಿಯೇ ಮೊಟಕುಗೊಳಿಸಿ ಉನ್ನತ ವಿದ್ಯಾಭ್ಯಾಸದ ಕನಸು ಕಾಣುತ್ತಿರುವವ ವಿದ್ಯಾಕಾಂಕ್ಷಿಗಳಿಗೆ ಭರವಸೆಯ ಆಶಾಕಿರಣವಾಗಿದೆ.
ಹಗಲು ಹೊತ್ತು ಉದ್ಯೋಗ, ವ್ಯಾಪಾರ ಅಥವಾ ಇತರ ವ್ಯಾಸಂಗ ಮಾಡಿಕೊಂಡು ಸಂಜೆಯ ವೇಳೆ ಪದವಿ ವಿದ್ಯಾಭ್ಯಾಸವನ್ನು ಈ ಕಾಲೇಜಿನಲ್ಲಿ ಸರಕಾರಿ ಶುಲ್ಕು ಪಾವತಿಸಿ ಮುಂದುವರಿಸಬಹುದಾಗಿದೆ. ಪ್ರಸ್ತುತ ಕಾಲೇಜಿನಲ್ಲಿ ಪದವಿ ಹಂತದಲ್ಲಿ ಬಿ.ಎ., ಬಿ.ಕಾಂ ಹಾಗೂ ಬಿ.ಸಿ.ಎ ವಿಭಾಗ ಗಳಿದ್ದು, ಸ್ನಾತಕೋತ್ತರ ಪದವಿ ಹಂತದಲ್ಲಿ ಎಂಬಿಎ (ಐಬಿ), ಎಂಕಾಂ, ಕೊಂಕಣಿ, ಇಂಗ್ಲಿಷ್ ಹಾಗೂ ತುಳು ಸ್ನಾತಕೋತ್ತರ ವಿಭಾಗಗಳು ಹಾಗೂ ಫ್ರೆಂಚ್ ಹಾಗೂ ಜರ್ಮನ್ ಭಾಷೆಗಳಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳು ಲಭ್ಯವಿದೆ.
ಪದವಿ ಹಂತದಲ್ಲಿ ಬಿಎ ವಿಭಾಗದಲ್ಲಿ ಅರ್ಥಶಾಸ್ತ್ರ, ಇತಿಹಾಸ ವಿಷಯಗಳೊಂದಿಗೆ ಪತ್ರಿಕೋದ್ಯಮ ವಿಷಯವನ್ನು ಅಧ್ಯಯನ ಮಾಡಬಹುದಾಗಿದೆ. ಬಿಎ ವಿಭಾಗದ ಅಧ್ಯಯನವು ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉತ್ತಮ ಆಯ್ಕೆಯಾಗಿರುತ್ತದೆ. ಪತ್ರಿಕೋದ್ಯಮ ವಿಷಯದ ಅಧ್ಯಯನವು ಇಂದಿನ ಸಮಯದಲ್ಲಿ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿರುವ ವಿವಿಧ ಉದ್ಯೋಗದ ಅವಕಾಶಗಳನ್ನು ಬಾಚಿಕೊಳ್ಳಲು ಸಹಕಾರಿಯಾಗಿರುತ್ತದೆ. ಮಂಗಳೂರು ವಿಶ್ವ ವಿದ್ಯಾನಿಲಯದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಧ್ಯಾ ಕಾಲೇಜುಗಳಲ್ಲಿ ವಿವಿ ಸಂಧ್ಯಾ ಕಾಲೇಜಿನಲ್ಲಿ ಮಾತ್ರ ಪತ್ರಿಕೋದ್ಯಮ ವಿಷಯವು ಸುಸಜ್ಜಿತವಾದ ಮಾಧ್ಯಮ ಪ್ರಯೋಗಾಲಯದೊಂದಿಗೆ ಲಭ್ಯವಿರುತ್ತದೆ.
ಸಿಎ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ಹಾಗೂ ಇತರೆ ಉದ್ಯೋಗ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೂ ಬಿಎ ಮತ್ತು ಬಿಸಿಎ ಕೋರ್ಸ್‌ಗಳು ಉಪಯುಕ್ತವಾಗಿವೆ. ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ವಿವಿಧ ಕೋರ್ಸ್‌ಗಳಿಗೆ ಸೀಟುಗಳು ಲಭ್ಯವಿದೆ. ಆಸಕ್ತರು ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ. (9448427705) ಅವರನ್ನು ಸಂಪರ್ಕಿಸಬಹುದಾಗಿದೆ.







