ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನದ ನಿರೀಕ್ಷೆ ಇದೆ: ಸಂಸದ ಡಾ.ಉಮೇಶ್ ಜಾಧವ್

ಕಲಬುರಗಿ, ಜೂ. 2: ಕೇಂದ್ರ ಸಚಿವ ಸಂಪುಟದಲ್ಲಿ ನನಗೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ನನಗೆ ಸಚಿವ ಸ್ಥಾನ ಕೈತಪ್ಪಿದೆ, ಇದಕ್ಕೆ ನನಗೇನೂ ಬೇಸರವಿಲ್ಲ ಎಂದು ಕಲಬುರಗಿ ಕ್ಷೇತ್ರದ ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡಿದರೆ ಸಮರ್ಪಕವಾಗಿ ನಿಭಾಯಿಸುವುದಾಗಿ ಹೇಳಿದ್ದೆ. ಆದರೆ, ನನಗೆ ಸಚಿವ ಸ್ಥಾನ ಸಿಗಲಿಲ್ಲ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನಗೆ ಅವಕಾಶ ಸಿಗುವ ಸಾಧ್ಯತೆಗಳಿವೆ ಎಂದು ಭರವಸೆ ವ್ಯಕ್ತಪಡಿಸಿದರು.
ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮಂತ್ರಿ ಸ್ಥಾನ ನೀಡುವ ನಿರೀಕ್ಷೆ ಹೊಂದಿದ್ದು, ಯಾವುದೇ ಖಾತೆಯನ್ನು ಖಾತೆ ನೀಡಿದರೂ ನಿಭಾಯಿಸುತ್ತೇನೆ ಎಂದ ಅವರು, ಕಲಬುರಗಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನಾನು ಶ್ರಮಿಸುತ್ತೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಅಮಿತ್ ಶಾ ತಾನು ಏನೆಂದು ತಮ್ಮ ಕರ್ತವ್ಯದ ಮೂಲಕವೇ ತೋರಿಸಲಿದ್ದಾರೆಂದು ಜಾಧವ್, ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದರು.







