ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಐವರು ಸ್ಥಳದಲ್ಲೇ ಸಾವು
ಟಯರ್ ಸ್ಫೋಟಗೊಂಡು ಲಾರಿಗೆ ಢಿಕ್ಕಿಯಾದ ಕಾರು

ಬೆಳಗಾವಿ, ಜೂ. 2: ಇಲ್ಲಿನ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕಾರಿನ ಟಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿಯಾದ ಪರಿಣಾಮ ಚಾಲಕ ಸೇರಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ರವಿವಾರ ಸಂಭವಿಸಿದೆ.
ಮೃತ ವಿದ್ಯಾರ್ಥಿಗಳನ್ನು ಔರಂಗಾಬಾದ್ ದೇವಗಿರಿಯ ನಿವಾಸಿಗಳಾದ ನಂದು ಪವಾರ್, ಅಮೂಲ ನಾವಿ, ಸುರೇಶ್ ಕಾನೇರಿ, ಅಮೂಲ ಚೌರಿ, ಮಹೇಶ್ ಚೌರಿ ಎಂದು ಗುರುತಿಸಲಾಗಿದೆ.
ಕೊಲ್ಹಾಪುರದಿಂದ ಬೆಳಗಾವಿ ಮೂಲಕ ಗೋವಾಕ್ಕೆ ತೆರಳುತ್ತಿದ್ದ ವೇಳೆ ಬೆಳಗಾವಿ ಹೊರ ವಲಯದ ಶ್ರೀನಗರದ ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ. ಕೊಲ್ಹಾಪುರದಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಗೋವಾಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಏಕಾಏಕಿ ಕಾರಿನ ಟಯರ್ ಸ್ಫೋಟಗೊಂಡಿದ್ದು, ತಡೆಗೋಡೆ ದಾಟಿ ಪಕ್ಕದ ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಐದು ಮಂದಿ ಸ್ಥಳದಲ್ಲೆ ಅಸುನೀಗಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದು ಬೆಳಗಾವಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎಂದು ಗೊತ್ತಾಗಿದೆ.
ಶರವೇಗದಲ್ಲಿ ಸಾಗುತ್ತಿದ್ದ ಕಾರು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತದೇಹಗಳು ಕಾರಿನಲ್ಲಿ ಸಿಲುಕಿದ್ದು, ಕೂಡಲೇ ನೆರವಿಗೆ ಧಾವಿಸಿದ ಸ್ಥಳೀಯರು ಹಾಗೂ ಪೊಲೀಸರು ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಘಟನಾ ಸ್ಥಳಕ್ಕೆ ನಗರ ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಡಿಸಿಪಿ ಯಶೋದಾ ಒಂಟಗೋಡಿ, ಎಸಿಪಿ ಎನ್.ವಿ.ಭರಮನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ಸಂಬಂಧ ಮಾಳ ಮಾರುತಿ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.







