ಅಲೆಮಾರಿಗಳ ಅಸ್ತಿತ್ವ ಉಳಿವಿಗಾಗಿ ಸಂಘಟಿತ ಹೋರಾಟ ಅಗತ್ಯ: ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು, ಜೂ.2 : ಅಲೆಮಾರಿ ಸಮುದಾಯಗಳಿಗೆ ನೆಲೆ ಇಲ್ಲದಂತಾಗುತ್ತಿದ್ದು, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಎಲ್ಲರೂ ಸಂಘಟಿತರಾಗಬೇಕು. ಅದಕ್ಕಾಗಿ ಮೂಲ ಅಸ್ತಿತ್ವವನ್ನು ಉಳಿಸಿಕೊಂಡು ಒಂದು ಒಕ್ಕೂಟ ರಚನೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದ್ದಾರೆ.
ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಅಲೆಮಾರಿಗಳ ಸ್ಥಿತಿಗತಿ, ಪ್ರಗತಿ ಕುಂಠಿತವಾಗಲು ಕಾರಣಗಳು ಹಾಗೂ ಮುಂದಿನ ಹೋರಾಟದ ಹಾದಿ ಕುರಿತು ಚರ್ಚಿಸಲು ಆಯೋಜಿಸಿದ್ದ ಅಲೆಮಾರಿ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಲೆಮಾರಿ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಶಿಕ್ಷಣ, ವಸತಿ ಸೇರಿದಂತೆ ಹಲವು ಸೌಲಭ್ಯಗಳು ವಂಚನೆಯಾಗಿವೆ. ಸರಕಾರದ ವಿವಿಧ ಇಲಾಖೆಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಪ್ರತ್ಯೇಕ ಅನುದಾನವಿದೆ. ಆದರೆ, ಇದುವರೆಗೂ ಅಲೆಮಾರಿ ಸಮುದಾಯಗಳ ಕುರಿತು ಒಂದೇ ಒಂದು ಕಾರ್ಯಕ್ರಮ ಮಾಡಿಲ್ಲ. ಅಧಿಕಾರದಲ್ಲಿರುವ ಸರಕಾರಕ್ಕೆ ಸಂಘಟಿತ ಹೋರಾಟದ ಬಿಸಿ ಮುಟ್ಟಿಸಿದಾಗಲೇ ಎಚ್ಚೆತ್ತುಕೊಳ್ಳುತ್ತಾರೆ ಎಂದರು.
ಎಲ್ಲ ರೀತಿಯ ಅಲೆಮಾರಿ ಸಮುದಾಯಗಳು ಒಂದೇ ವೇದಿಕೆಯಡಿ ಬರಬೇಕು. ಸಾಂಸ್ಕೃತಿಕ ಅಸ್ಮಿತೆಯ ಜತೆಗೆ ಆಧುನೀಕತೆಯನ್ನು ಅಳವಡಿಸಿಕೊಳ್ಳಬೇಕು. ಸಾಂಸ್ಕೃತಿಕ ಅಸ್ಮಿತೆಯನ್ನು ಮುನ್ನೆಲೆಗೆ ತರಬೇಕು ಎಂದ ಅವರು, ಅಲೆಮಾರಿಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿಕೊಂಡು, ಅಸಂಘಟಿತರಾಗಿರುವ ಎಲ್ಲರೂ ಸಂಘಟಿತರಾಗಿ ಸೌಲಭ್ಯಗಳಿಗಾಗಿ ಹೋರಾಟದ ಹಾದಿ ಹಿಡಿಯಬೇಕು ಎಂದು ನುಡಿದರು.
ಪರಿಶಿಷ್ಟರಲ್ಲಿ ಶೋಷಣೆಗೆ ಒಳಗಾದವರು ಅಲೆಮಾರಿ ಸಮುದಾಯವಾಗಿದೆ. ಪರಿಶಿಷ್ಟರಲ್ಲಿರುವ 101 ಜಾತಿಗಳಲ್ಲಿ ಕೇವಲ 10 ಜಾತಿಗಳು ಶೇ.93.44 ರಷ್ಟು ಸೌಲಭ್ಯಗಳನ್ನು ಪಡೆಯುತ್ತಿವೆ. ಇಂದು ಶ್ರೇಣಿಕೃತ ವ್ಯವಸ್ಥೆಯಲ್ಲಿ ಶೂದ್ರರೊಳಗೆ ಶ್ರೇಣಿಕರಣವಿದ್ದು, ಇದು ಅತ್ಯಂತ ಅಪಾಯಕಾರಿಯಾದುದಾಗಿದೆ ಎಂದ ಅವರು, ಶೋಷಿತರ ಒಳಗಿನ ಶ್ರೇಣಿಕರಣ ನಿರ್ಮೂಲನೆ ಆಗಬೇಕು. ಇಲ್ಲದಿದ್ದರೆ, ಇದು ಶೋಷಣೆ ಮಾಡುವವರಿಗೆ ಅನುಕೂಲವಾಗುತ್ತದೆ ಎಂದು ಬರಗೂರು ಎಚ್ಚರಿಸಿದರು.
ಇಂದಿನ ತಳ ಸಮುದಾಯಗಳಲ್ಲಿಯೇ ಅಸಹನೆ, ಅಸೂಯೆ ತುಂಬಿ ತುಳುಕುತ್ತಿದೆ. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ಜಾತಿಗಳಲ್ಲಿಯೇ ಹೆಚ್ಚಿಗೆ ಕಂಡುಬರುತ್ತದೆ. ಸಣ್ಣ-ಪುಟ್ಟ ಸೌಲಭ್ಯಗಳಿಗಾಗಿ ಅಸಹನೆ ಬೆಳೆಸಿಕೊಳ್ಳುತ್ತಿದ್ದು, ಸೈದ್ಧಾಂತಿಕ ಆಲೋಚನೆಯಿಂದ ದೂರವಾಗುತ್ತಿದ್ದಾರೆ. ತಳ ಸಮುದಾಯಗಳು ಸೈದ್ಧಾಂತಿಕವಾಗಿ ತಿಳುವಳಿಕೆ ಪಡೆದಿದ್ದರೆ, ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶ ಭಿನ್ನವಾಗಿರುತ್ತಿತ್ತು. ಹೀಗಾಗಿ, ಎಲ್ಲರಿಗೂ ಸರಿಯಾದ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿ 749 ಅಲೆಮಾರಿ ಸಮುದಾಯಗಳಿದ್ದು, ಅದರಲ್ಲಿ 482 ಅರೆ ಅಲೆಮಾರಿ ಜನಾಂಗಗಳಿವೆ. ಅದೇ ರೀತಿ ಕರ್ನಾಟಕದಲ್ಲಿ 56 ಅಲೆಮಾರಿ ಸಮುದಾಯಗಳಿದ್ದು, 24 ಅರೆ ಅಲೆಮಾರಿ ಜನಾಂಗಗಳಿವೆ. ಕೆಲವು ಕಡೆಗಳಲ್ಲಿ ಅಲೆಮಾರಿಗಳು ಎಸ್ಸಿ ಪಟ್ಟಿಗೆ, ಎಸ್ಟಿ ಪಟ್ಟಿ ಹಾಗೂ ಒಬಿಸಿ ಪಟ್ಟಿಗೂ ಸೇರಿಸಿಕೊಂಡಿದ್ದಾರೆ ಎಂದು ಹೇಳಿದರು.
ಅಲೆಮಾರಿ ಸಮುದಾಯಗಳು ತಮ್ಮ ಜಾತಿಯನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದರಿಂದ ಸರಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಸ್ವಜಾತಿಯಲ್ಲಿನ ಮೇಲ್ಜಾತಿಯವರು ತಮ್ಮ ಅಧಿಕಾರ ಬಳಸಿಕೊಂಡು ಇವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಿಗದಂತೆ ಮಾಡುತ್ತಿದ್ದಾರೆ ಎಂದು ಅಪಾದಿಸಿದರು.
ಸರಕಾರಗಳು ಅಲೆಮಾರಿ ಸಮುದಾಯಗಳಿಗೆ ನಿರ್ಧಿಷ್ಟವಾದ ಒಂದು ಜಾತಿ ನಮೂನೆಯನ್ನು ನೀಡಬೇಕು. ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿರುವ ಗೊಂದಲಗಳನ್ನು ನಿವಾರಣೆ ಮಾಡಲು ಸಂಘಟಿತ ಹೋರಾಟದ ಅಗತ್ಯವಿದೆ ಎಂದ ಅವರು, ಇತ್ತೀಚಿಗೆನ ದಿನಗಳಲ್ಲಿ ಎಲ್ಲವನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಈ ಖಾಸಗೀಕರಣದ ನಡುವೆ ಶೋಷಿತ ಸಮುದಾಯಗಳಿಗೆ ಸಿಗುವ ಸೌಲಭ್ಯಗಳಿಂದ ಮತ್ತಷ್ಟು ವಂಚಿತರಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ, ಚಲನಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್, ಅಲೆಮಾರಿ ಸಮುದಾಯದ ಮುಖಂಡ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







