ಶಾಸ್ತ್ರೀಯ ಹಾಡುಗಾರಿಕೆಯು ಮನೋಲ್ಲಾಸದ ಜೊತೆಗೆ ಜೀವನ ಉಲ್ಲಾಸವನ್ನು ನೀಡುತ್ತದೆ-ಪ್ರೊ. ಅರ್ತಿಕಜೆ
ಪುಸ್ತಕ ಮೇಳ, ಸಾಹಿತ್ಯ ಉತ್ಸವ

ಪುತ್ತೂರು: ಶಾಸ್ತ್ರೀಯ ಹಾಡುಗಾರಿಕೆಯು ಮನೋಲ್ಲಾಸದ ಜೊತೆಗೆ ಜೀವನ ಉಲ್ಲಾಸವನ್ನು ನೀಡುತ್ತದೆ. ಶಾಸ್ತ್ರೀಯ ಸಂಗೀತ ಕಲೆಗೆ ಮನಸ್ಸನ್ನು ಅರಳಿಸುವ ಶಕ್ತಿ ಇದೆ ಎಂದು ನಿವೃತ್ತ ಉಪನ್ಯಾಸಕರಾದ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಹೇಳಿದರು.
ಅವರು ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ಮತ್ತು ಮಹಾಲಿಂಗೇಶ್ವರ ದೇವಾಲಯದ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಮೂರು ದಿನಗಳ 'ಪುಸ್ತಕ ಮೇಳ-ಸಾಹಿತ್ಯ ಉತ್ಸವ' ಕಾರ್ಯಕ್ರಮದಲ್ಲಿ ಎರಡನೇ ದಿನವಾದ ಭಾನುವಾರ ನಡೆದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಗೀತದಲ್ಲಿ ಭಕ್ತಿಸಂಗೀತ ಮತ್ತು ರಕ್ತಿ ಸಂಗೀತಗಳಿಗೆ ಲಯ, ರಾಗ, ತಾಳ, ಶಾಸ್ತ್ರೀಯತೆ ಇದ್ದು, ಭಕ್ತಿ ಹುಟ್ಟಿಸುವ ಶಕ್ತಿ ಭಕ್ತಿ ಸಂಗೀತಕ್ಕಿದ್ದರೆ, ಅನುರಾಗ ಹುಟ್ಟಿಸುವ ಶಕ್ತಿ ರಕ್ತಿ ಸಂಗೀತಕ್ಕಿದೆ. ಈ ಎರಡೂ ಸಂಗೀತಗಳು ಯಾವುದೇ ಅಬದ್ಧಗಳನ್ನು ಹೊಂದಿಲ್ಲ ಎಂದು ಅವರು ಹೇಳಿದರು.
ಸಾವಯವ ತರಕಾರಿ ಸಂತೆಗೆ ಚಾಲನೆ ನೀಡಿದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎ.ವಿ. ನಾರಾಯಣ ಅವರು, ಕೃಷಿ ಕ್ಷೇತ್ರದಲ್ಲಿ ಈಗ ಸಾವಯವ ಪದ್ಧತಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರವನ್ನು ಬಳಕೆ ಮಾಡಿ ಬೆಳೆಯುವ ಸಾವಯವ ತರಕಾರಿ, ಹಣ್ಣು ಹಂಪಲು ಹಾಗೂ ಆಹಾರಗಳನ್ನು ನಮ್ಮ ಆರೋಗ್ಯವರ್ಧನೆಯ ದೃಷ್ಟಿಯಿಂದ ಸೇವಿಸುವ ಅಗತ್ಯವಿದೆ ಎಂದರು.
ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ. ಶಿವರಾಮಯ್ಯ ಅವರು, ಹಸಿರು ಕ್ರಾಂತಿಯ ಬಳಿಕ ರಾಸಾಯನಿಕ ಗೊಬ್ಬರಗಳ ಮಿತಿಮೀರಿದ ಬಳಕೆ ಮಣ್ಣಿನ ಫಲವತ್ತತೆಯನ್ನು ಕಡಿಮೆ ಮಾಡಿದೆ. ಅಂದಿನ ಪರಿಸ್ಥಿತಿಯಲ್ಲಿ ಅಧಿಕ ಆಹಾರ ಉತ್ಪಾದನೆಯ ಅವಶ್ಯಕತೆ ಇತ್ತು.ಆದರೆ ಇದೀಗ ಮಿತಿಮೀರಿದ ರಾಸಾಯನಿಕಗಳ ಬಳಕೆ ಆಹಾರವನ್ನು ವಿಷವಾಗಿ ಪರಿವರ್ತಿಸುತ್ತಿದೆ. ಈ ಬಗ್ಗೆ ನಾವು ಎಚ್ಚೆತ್ತುಕೊಂಡು ಮತ್ತೆ ಈ ಮಣ್ಣಿನ ಮೂಲ ಸಂಪ್ರದಾಯಿಕ ಸಾವಯವ ಕೃಷಿಯತ್ತ ಮನ ಮಾಡಬೇಕಾಗಿದೆ ಎಂದರು.
ವಿದೂಷಿ ಸುಚಿತ್ರಾ ಹೊಳ್ಳ ಅವರು ಮಾತನಾಡಿ, ಶಾಸ್ತ್ರೀಯ ಸಂಗೀತವು ಸಾವಯವ ತರಕಾರಿಯಂತೆ ಯಾವುದೇ ಕಲಬೆರಕೆ ಇಲ್ಲದ ಶುದ್ಧತೆಯನ್ನು ಹೊಂದಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಬಿ. ಐತಪ್ಪ ನಾಯ್ಕ್ ಅವರು, ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಹಾಗೂ ಸಾವಯವ ಕೃಷಿ ಪದ್ದತಿಯ ಕಡೆಗೆ ಸಾಗುವುದು ಇಂದು ಅನಿವಾರ್ಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಸರೋಜಿನಿ ಮೇನಾಲ ಅವರು ಸ್ವಾಗತಿಸಿ, ವಂದಿಸಿದರು. ರಾಮಕುಂಜದ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿಗಳಾದ ಜ್ಯೋತಿ ರಾವ್ ಎಚ್. ಮತ್ತು ಜೋತ್ಸ್ನಾ ರಾವ್ ಎಚ್. ಕಾರ್ಯಕ್ರಮ ನಿರೂಪಿಸಿದರು.







