ಕುವೈತ್: ಮಂಗಳೂರು ಸಂತ್ರಸ್ತರು ಮರಳುವ ಹಾದಿ ಸುಗಮ
ಜೂ.3ರಂದು ನಡೆಯುವ ಸಭೆಯಲ್ಲಿ ಅಂತಿಮ ಸಾಧ್ಯತೆ
ಮಂಗಳೂರು, ಜೂ.2: ಉದ್ಯೋಗಕ್ಕಾಗಿ ಕುವೈತ್‌ಗೆ ತೆರಳಿ ಅತಂತ್ರವಾಗಿರುವ ಮಂಗಳೂರಿನ 35 ಯುವಕರ ಸಹಿತ ಸುಮಾರು 100 ಮಂದಿ ಭಾರತೀಯರು ಮರಳಿ ತಾಯ್ನಾಡಿಗೆ ಮರಳುವ ಹಾದಿ ಜೂ.3ರಂದು ನಡೆಯುವ ಸಭೆಯಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ.
ಕುವೈತ್ ನಲ್ಲಿರುವ ಸರಕಾರಿ ಸ್ವಾಮ್ಯದ ನ್ಯಾಯಾಲಯ ಮಾದರಿ ಸಂಸ್ಥೆ (ಶೋನ್)ನಲ್ಲಿ ರವಿವಾರ ನಿರ್ಣಾಯಕ ಸಭೆ ನಡೆದಿದೆ. ಕುವೈತ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಉಪ ಕಾರ್ಯದರ್ಶಿ ಶಿಬಿ ಯು.ಎಸ್., ಶೋನ್, ಪಬ್ಲಿಕ್ ಅಥಾರಿಟಿ ಆಫ್ ಮ್ಯಾನ್‌ಪವರ್ (ಪ್ಯಾಮ್), ಇನೆಸ್ಕೋ ಜನರಲ್ ಟ್ರೇಡಿಂಗ್ ಆ್ಯಂಡ್ ಕಂಟ್ರಾಕ್ಟಿಂಗ್ ಕಂಪೆನಿ ಪ್ರತಿನಿಧಿಗಳು ಹಾಗೂ ಸಂತ್ರಸ್ತರು ಸಭೆಯಲ್ಲಿ ಭಾಗವಹಿಸಿದ್ದರು.
ಉದ್ಯೋಗ ನೀಡಿದ ಅನೆಸ್ಕೋ ಜನರಲ್ ಟ್ರೇಡಿಂಗ್ ಕಂಪೆನಿಯು ಅತಂತ್ರರಾದ ಎಲ್ಲ ಭಾರತೀಯ ನೌಕರರಿಗೆ ತಲಾ ಸ್ವಲ್ಪ ಮೊತ್ತ ನೀಡಿ, ವೀಸಾ ರದ್ದುಗೊಳಿಸಿ, ಮೂಲ ಪಾಸ್‌ಪೋರ್ಟ್ ಮರಳಿಸುವ ಭರವಸೆ ನೀಡಿದೆ. ಇದನ್ನೆಲ್ಲ ಸೋಮವಾರ ರಾಯಭಾರ ಕಚೇರಿಗೆ ತಂದು ಒಪ್ಪಿಸುವುದಾಗಿ ಕಂಪೆನಿ ಹೇಳಿದೆ. ಆದರೆ ರಾಯಭಾರ ಕಚೇರಿ ಇದಕ್ಕೆ ಒಪ್ಪಿಗೆ ನೀಡಿಲ್ಲ. ಇದಕ್ಕೂ ಮೊದಲು ಇದೇ ರೀತಿ ಕಂಪೆನಿಗಳು ಭರವಸೆ ನೀಡಿ ಮತ್ತೆ ಅತ್ತ ತಲೆಹಾಕುವುದಿಲ್ಲ. ಮತ್ತೆ ಸಭೆ ನಡೆಸಿ ಕರೆಸುವ ಪ್ರಯತ್ನ ನಡೆಸಬೇಕು. ಇಂತಹ ಅನುಭವ ಆಗಿರುವ ಹಿನ್ನೆಲೆಯಲ್ಲಿ ಸೋಮವಾರ ನಡೆಯುವ ಶೋನ್ ಸಭೆಯಲ್ಲಿ ಪಾಸ್‌ಪೋರ್ಟ್ ಹಾಗೂ ಮೊತ್ತವನ್ನು ನೀಡುವಂತೆ ತಾಕೀತು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸತಾಯಿಸಿದ ಕಂಪೆನಿ ಸಿಬ್ಬಂದಿ ?: ಈ ಕುರಿತು ಗುರುವಾರ ನಡೆದ ಶೋನ್ ಸಭೆಯಲ್ಲಿ ಕೆಲಸ ಮಾಡುವ ಕಂಪೆನಿಯ ಮೊಬೈಲ್ ಹಾಗೂ ಕಂಪೆನಿ ವಸ್ತುಗಳಿರುವುದನ್ನು ರವಿವಾರದೊಳಗೆ ಕಂಪೆನಿಗೆ ಮರಳಿಸಿ ಕ್ಲಿಯರೆನ್ಸ್ ಪತ್ರ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ರವಿವಾರ ಕಂಪೆನಿಗೆ ತೆರಳಿದ ಭಾರತೀಯ ಸಂತ್ರಸ್ತ ನೌಕರರನ್ನು ಸಿಬ್ಬಂದಿ ಸತಾಯಿಸಿದ್ದರು.
ಮೊಬೈಲ್ ಹಾಗೂ ದ್ವಿಚಕ್ರ ವಾಹನ ಸಮೇತ ಇತರ ವಸ್ತುಗಳನ್ನು ಸ್ವೀಕರಿಸಲು ಸಾಕಷ್ಟು ಸತಾಯಿಸಿದ್ದಾರೆ ಎಂದು ದೂರಲಾಗಿದೆ. ಅರೇಬಿಕ್ ಭಾಷೆಯಲ್ಲಿದ್ದ ಕಾರಣ ಅದರಲ್ಲಿ ಬರೆದಿರುವುದನ್ನು ತಿಳಿಯದೆ ಸಂತ್ರಸ್ತರು ಸಹಿ ಹಾಕಲು ನಿರಾಕರಿಸಿದ್ದರು. ಬಳಿಕ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಹಿ ಹಾಕಿಸಲು ಒಪ್ಪಿಸಿದ್ದರು. ಸುಮಾರು 53 ಮಂದಿ ಸಹಿ ಹಾಕಿದ್ದು, ತಮ್ಮಲ್ಲಿರುವ ಕಂಪೆನಿ ಸೊತ್ತುಗಳನ್ನು ವಾಪಸ್ ಮರಳಿಸಿದ್ದಾರೆ. ಈ ಮಧ್ಯೆ 7 ಮಂದಿ ಸಂತ್ರಸ್ತರು ಒಂದು ವಾರ ಮೊದಲೇ ಕಂಪೆನಿಗೆ ರಾಜೀನಾಮೆ ನೀಡಿದ್ದು, ಅವರ ಮುಂದಿನ ನಡೆ ಏನು ಎಂಬುದು ಸ್ಪಷ್ಟವಾಗಿಲ್ಲ.
ಸಭೆಗೆ 60 ಮಂದಿ ಹಾಜರ್: ಶೋನ್ ನಡೆಸಿದ ಸಭೆಗೆ ಎಲ್ಲ ಸಂತ್ರಸ್ತ ನೌಕರರಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಹಲವು ಮಂದಿ ಸೊತ್ತುಗಳನ್ನು ಮರಳಿಸಲು ಕಂಪೆನಿಗೆ ತೆರಳಿದರೆ, ಉಳಿದ 60 ಮಂದಿ ಸಭೆಗೆ ಬಸ್‌ನಲ್ಲಿ ಆಗಮಿಸಿದ್ದರು. ಎಲ್ಲ ಸಂತ್ರಸ್ತರು ಹಾಜರಾಗದ ಹಿನ್ನೆಲೆಯಲ್ಲಿ ಸಭೆಯನ್ನು ಮತ್ತೆ ಜೂ.3ರಂದು ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದ್ದು, ಸಂತ್ರಸ್ತರ ವೀಸಾ ರದ್ದುಗೊಳಿಸಿ, ಮೂಲ ಪಾಸ್‌ಪೋರ್ಟ್‌ನ್ನು ಮರಳಿಸುವಂತೆ ಕಂಪೆನಿಗೆ ರಾಯಭಾರ ಕಚೇರಿ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಆಂಶಿಕವಾಗಿ ಕಂಪೆನಿ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಆದರೆ ಸಂತ್ರಸ್ತರಿಗೆ ಪರಿಹಾರವಾಗಿ ನಾಮ್ಕೇವಾಸ್ತೆ ಮೊತ್ತ ನೀಡಲು ಸಮ್ಮತಿಸಿದ್ದಾರೆ. ಈ ಮೊತ್ತ ಸಂತ್ರಸ್ತರಿಗೆ ಏನೇನೂ ಸಾಲದು. ಆದರೆ ಮತ್ತೆ ಕೋರ್ಟ್, ಕೇಸ್ ಎಂದು ಹೊರಟರೆ ಮತ್ತೆ ಸ್ವದೇಶಕ್ಕೆ ಮರಳು ತಿಂಗಳುಗಳೇ ಬೇಕಾಗಬಹುದು ಎಂಬ ಸೂಚನೆಯನ್ನೂ ರಾಯಭಾರ ಕಚೇರಿ ಅಧಿಕಾರಿಗಳು ಸಂತ್ರಸ್ತರಿಗೆ ನೀಡಿದ್ದಾರೆ. ಅಲ್ಲದೆ, ಭಾರತಕ್ಕೆ ಮರಳಿದ ಬಳಿಕ ವಿದೇಶಾಂಗ ಇಲಾಖೆಯ ಮೂಲಕ ವಂಚಕ ಕಂಪೆನಿ ವಿರುದ್ಧ ಕಾನೂನು ಹೋರಾಟ ಮುಂದುವರಿಸಬಹುದು ಎಂಬ ಸಲಹೆಯನ್ನೂ ನೀಡಿದೆ.
ಸ್ವದೇಶಕ್ಕೆ ಟಿಕೆಟ್ ನೀಡುವುದು ಯಾರು?
ಕುವೈತ್ ನಲ್ಲಿ ಅತಂತ್ರ ಸ್ಥಿತಿಯಲ್ಲಿ ಇರುವ 100 ಮಂದಿ ಭಾರತೀಯ ಸಂತ್ರಸ್ತ ನೌಕರರಿಗೆ ಸ್ವದೇಶಕ್ಕೆ ಮರಳಲು ವಿಮಾನ ಟಿಕೆಟ್ ನೀಡುವುದು ಯಾರು? ಈ ಪ್ರಶ್ನೆಗೆ ಸದ್ಯ ಭಾರತೀಯ ರಾಯಭಾರಿ, ಉದ್ಯೋಗ ನೀಡಿದ ಕಂಪೆನಿ ಸಹಿತ ಯಾರಲ್ಲೂ ನಿಖರ ಉತ್ತರ ಇಲ್ಲ.
ಉದ್ಯೋಗಕ್ಕೆ ಕಳುಹಿಸಿದ ಮಂಗಳೂರಿನ ಮಾಣಿಕ್ಯ ಸಂಸ್ಥೆಯಿಂದಲೇ ಟಿಕೆಟ್ ವ್ಯವಸ್ಥೆ ಮಾಡಿಸಿಕೊಳ್ಳುವಂತೆ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಗುರುವಾರ ನಡೆದ ಸಭೆಯಲ್ಲಿ ಸೂಚಿಸಿದ್ದರು. ಇದಕ್ಕಾಗಿ ಮಂಗಳೂರು ಪೊಲೀಸ್ ಆಯುಕ್ತರು, ಶಾಸಕರ ನೆರವು ಪಡೆದು ಕೊಳ್ಳುವಂತೆ ಅವರು ಅನಿವಾಸಿ ಭಾರತೀಯ ಸಂಘಟನೆ ಪ್ರತಿನಿಧಿಗಳಿಗೆ ತಿಳಿಸಿದ್ದರು. ಆದರೆ ಇಲ್ಲಿಂದ ಸಕಾರಾತ್ಮಕ ಸ್ಪಂದನ ದೊರೆತಿಲ್ಲ ಎನ್ನಲಾಗಿದೆ.
ಕುವೈತ್‌ನಲ್ಲಿ ರಮಝಾನ್ ಜೊತೆಗೆ ಶಾಲಾ ಕಾಲೇಜುಗಳಿಗೆ ಆಗಸ್ಟ್ ಮಧ್ಯಭಾಗವರೆಗೆ ರಜೆ. ಹಾಗಾಗಿ ಕುವೈತ್ ಮತ್ತು ಭಾರತ ವಿಮಾನ ಮಾರ್ಗ ಈಗ ಅತೀ ದಟ್ಟಣೆಯಿಂದ ಕೂಡಿದೆ. ದ.ಕ. ಜಿಲ್ಲೆಯ 35 ಮಂದಿ ಸಂತ್ರಸ್ತರು ಊರಿಗೆ ಮರಳಬೇಕಾದರೆ ವಿಮಾನದ ಟಿಕೆಟ್ ಸುಲಭದಲ್ಲಿ ಸಿಗುವುದು ಕಷ್ಟ. ಮಂಗಳೂರು ಅಥವಾ ಕೊಚ್ಚಿನ್ ಮೂಲಕ ಬರಬೇಕಾಗಿದೆ.
ನಾಲ್ಕೈದು ಸೀಟು ಖಾಲಿ ಇದ್ದರೆ ಮಾತ್ರ ಟಿಕೆಟ್ ಸಿಗಬಹುದು. ಸಾಮಾನ್ಯವಾಗಿ ಆಗಸ್ಟ್‌ವರೆಗೆ ಸೀಸನ್ ಟಿಕೆಟ್. ಟಿಕೆಟ್ ದರವೂ ದುಬಾರಿ. ಹಾಗಾಗಿ ಕೊಚ್ಚಿನ್‌ಗೆ 31 ದಿನಾರ್(1 ದಿನಾರ್ 228 ರು.) ಅಂದರೆ 29ರಿಂದ 29 ಸಾವಿರ ರೂ. ಅಗತ್ಯವಿದೆ. ಮಂಗಳೂರಿಗೆ 25 ದಿನಾರ್(27 ಸಾವಿರ ರು. ವರೆಗೆ ಬೇಕಾಗುತ್ತದೆ. ಸಂತ್ರಸ್ತರಿಗೆ ಇಷ್ಟೊಂದು ಮೊತ್ತವನ್ನು ಭರಿಸುವವರು ಯಾರು ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
ಸಂತ್ರಸ್ತರಿಗೆ ಉಚಿತ ವ್ಯವಸ್ಥೆ
ಕುವೈತ್ ನಲ್ಲಿ ಉದ್ಯೋಗ ವಂಚಿತಗೊಂಡು ಶೆಡ್‌ಗಳಲ್ಲಿ ಇರುವ 100 ಮಂದಿ ಸಂತ್ರಸ್ತರ ಊಟ, ವಸತಿಗೆ ಅನಿವಾಸಿ ಭಾರತೀಯ ಕುವೈತ್ ಉದ್ಯಮಿಗಳು ಉದಾರವಾಗಿ ಧಾವಿಸಿದ್ದಾರೆ.
ದಿಲ್ಲಿ ಮೂಲದ ಉದ್ಯಮಿ ಆಕಾಶ್ ಎಂಬವರು ರಾತ್ರಿಗೆ ಪಲಾವ್ ಪೂರೈಸುತ್ತಿದ್ದಾರೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟದ ಜವಾಬ್ದಾರಿಯನ್ನು ಇನ್‌ಸ್ಟಿಟ್ಯೂಷನ್ ಇಂಜಿನಿಯರ್ಸ್ ಇಂಡಿಯಾದ ಇಲಾಂಗೋಂವ್, ಪಣಿಕ್ಕರ್, ಮೋಹನದಾಸ್ ಕಾಮತ್, ಶೇಖರ್ ಹಾಗೂ ತುಳುಕೂಟ ಕುವೈತ್ ಭರಿಸುತ್ತಿದೆ.







