ರಾಜಕಾರಣಿಗಳು ಕಲಾಸಕ್ತಿ ಬೆಳೆಸಿದರೆ ಜನಸಾಮಾನ್ಯರಾಗಿ ಬದುಕಲು ಸಾಧ್ಯ: ಹೆಗ್ಡೆ

ಉಡುಪಿ, ಜೂ. 2: ರಾಜಕಾರಣಿಗಳು ಕೇವಲ ರಾಜಕಾರಣವನ್ನು ಮಾಡುವುದು ಬಿಟ್ಟು ಕಲೆ, ಸಂಗೀತ, ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಸಾಮಾನ್ಯ ಮನುಷ್ಯರಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಜಯ ಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕರಾವಳಿಯ ಪ್ರತಿಭೆಗಳ ಕಾರಂಜಿ ‘ಅಪರಂಜಿ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜಕಾರಣಿಗಳು ದಿನದ 24 ಗಂಟೆಯೂ ರಾಜಕಾರಣದ ಬಗ್ಗೆಯೇ ಚಿಂತನೆ ಮಾಡದೆ, ಕಲೆ, ಸಂಗೀತ, ಕ್ರೀಡೆಯಂತಹ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಬೇಕು. ಇದರಿಂದ ರಾಜಕಾರಣಿಗಳ ಒತ್ತಡ ಕಡಿಮೆ ಆಗುವುದಲ್ಲದೆ, ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಅವರು ತಿಳಿಸಿದರು.
ಕಲಾವಿದರು ಬಣ್ಣ ಹಚ್ಚಿಕೊಂಡು ನಾಟಕ ಮಾಡುತ್ತಾರೆ. ಆದರೆ ರಾಜ ಕಾರಣಿಗಳು ಬಣ್ಣ ಹಚ್ಚದೆಯೇ ನಾಟಕ ಮಾಡುತ್ತಾರೆ ಎಂದ ಅವರು, ಸಾಧಕ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಮುಂದಿನ ಪೀಳಿಗೆಗೆ ಪ್ರೇರಣೆ ಯಾಗುತ್ತದೆ. ನಾವು ಏನಾದರೂ ಸಾಧನೆ ಮಾಡಬೇಕು. ನಮ್ಮನ್ನು ಈ ರೀತಿ ಗುರುತಿಸುತ್ತಾರೆ ಎಂಬ ಮನೋಭಾವನೆ ಅವರಲ್ಲಿ ಬೆಳೆಯುತ್ತದೆ. ಇದರಿಂದ ಸಾಧನೆ ಮಾಡಬೇಕೆಂಬ ತುಡಿತ ಹೆಚ್ಚಾಗುತ್ತದೆ. ಈ ಹಂಬಲ, ತುಡಿತ ಅವರನ್ನು ಸಾಧನೆಯ ಶಿಖರಕ್ಕೆ ಏರಿಸುತ್ತದೆ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಉಪಸ್ಥಿತರಿ ದ್ದರು. ಸಂಘಟಕ ಅವಿನಾಶ್ ಕಾಮತ್ ವಂದಿಸಿದರು. ಶ್ರೇಯಸ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಇತ್ತೀಚೆಗೆ ಬಸ್ ಅಪಘಾತದಲ್ಲಿ ತನ್ನ ಬಲಗೈಯನ್ನೇ ಕಳೆದುಕೊಂಡಿರುವ ಎಂಜಿಎಂ ಕಾಲೇಜಿನ ಬಡ ಅಂತಿಮ ಪದವಿ ವಿದ್ಯಾರ್ಥಿ ಅಜಿತ್ ಶೆಟ್ಟಿ ಅವರಿಗೆ ಈ ಕಾರ್ಯಕ್ರಮದ ಮೂಲಕ ದೇಣಿಗೆಯನ್ನು ಸಂಗ್ರಹಿಸಲಾಯಿತು. ಟಿವಿಯ ಸಾರೆಗಾಮಪಾ ಕಾರ್ಯಕ್ರಮಗಳಲ್ಲಿ ಮಿಂಚಿರುವ ಕಟಪಾಡಿಯ ಡಾ.ಅಭಿಷೇಕ ರಾವ್ ಮತ್ತು ಉಡುಪಿಯ ರಜತ್ ಮಯ್ಯ, ಖ್ಯಾತ ಹಿನ್ನೆಲೆ ಗಾಯಕಿಯರಾದ ಕೆಜಿಎಫ್ ಖ್ಯಾತಿಯ ಐರಾ ಆಚಾರ್ಯ, ವೈಷ್ಣವಿ ರವಿ, ರೂಬಿಕ್ ಕ್ಯೂಬ್ ತಜ್ಞ ಪ್ರಥ್ವೀಶ್ ಕೆ., ಗಿನ್ನೆಸ್ ದಾಖಲೆಯ ಕಲಾವಿದ ಪ್ರದೀಶ್ ಕೆ., ಯೋಗದ ಭಂಗಿಗಳಲ್ಲಿ ಗಿನ್ನಿಸ್ ದಾಖಲೆ ಬರೆದ ತನುಶ್ರೀ ಪಿತ್ರೋಡಿ, ಖ್ಯಾತ ಸ್ಯಾಕ್ಸೋಫೋನ್ ವಾದಕಿ ಅಂಜಲಿ ಶ್ಯಾನುಭಾಗ್ ಹಾಗೂ ಟಿವಿ ಆ್ಯಂಕರ್ ಅವಿನಾಶ್ ಕಾಮತ್ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.







