ಮಿಲ್ಟನ್‌ರಂತ ಕವಿಯ ಕೃತಿಗಳ ಅನುವಾದ ಕಷ್ಟಕರ: ಪ್ರೊ.ಸಿ.ಎನ್.ರಾಮಚಂದ್ರನ್

ಬೆಂಗಳೂರು, ಜೂ.2: ಮಿಲ್ಟನ್ ವಿಚಿತ್ರ ವ್ಯಕ್ತಿಯಾಗಿದ್ದು, ತನ್ನ ಕಣ್ಣುಗಳನ್ನು ಕಳೆದುಕೊಂಡರೂ, ಧೃತಿಗೆಡದೆ ಮಹಾಕಾವ್ಯಗಳನ್ನು, ನಾಟಕಗಳನ್ನು ರಚಿಸಿದ. ಮಿಲ್ಟನ್‌ನಂತಹ ಕವಿಯ ಕೃತಿಗಳ ಅನುವಾದ ಬಹಳ ಕಷ್ಟ ಎಂದು ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಹೇಳಿದ್ದಾರೆ.
ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನ ಹೊರತಂದಿರುವ ಮಹಾಕವಿ ಜಾನ್ ಮಿಲ್ಟನ್‌ನ ಪ್ರೊ.ಕೆ.ಎಂ.ಸೀತಾರಾಮಯ್ಯ ಅವರು ಅನುವಾದಿಸಿರುವ ‘ಪ್ಯಾರಡೈಸ್ ಲಾಸ್ಟ್ ಮತ್ತು ಪ್ಯಾರಡೈಸ್ ರಿಗೇಯ್ನಾಡ್’, ಶ್ರೀನಿಧಿ ಡಿ.ಎಸ್. ಅವರ ‘ತೂಗುಮಂಚದಲ್ಲಿ ಕೂತು’ ಹಾಗೂ ವೈ.ಎನ್.ಗುಂಡೂರಾವ್ ರಚಿಸಿರುವ ‘ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ ಕಥಾಸರಿತ್ಸಾಗರದ ಕಥೆಗಳು’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು, ‘ಮಿಲ್ಟನ್ ಹಾಗೂ ಆತನ ಕಾವ್ಯ’ ಕುರಿತು ಮಾತನಾಡಿದರು.
15ನೇ ಶತಮಾನದಲ್ಲಿ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಾಗಲೂ ಧೃತಿಗೆಡದೆ ಮನಸ್ಸಿನಲ್ಲಿ ಸಂಕಲ್ಪಿಸಿದ್ದ ಮಹಾಕಾವ್ಯಗಳು, ನಾಟಕಗಳನ್ನು ರಚಿಸಿದ. ಆತನ ಪ್ಯಾರಡೈಸ್ ಲಾಸ್ಟ್ ಮಹಾಕಾವ್ಯ ಅರ್ಥೈಸಿಕೊಳ್ಳಲು ಪಾಶ್ಚಾತ್ಯ ಸಾಹಿತ್ಯ ಪರಂಪರೆಯ ಸಮಗ್ರ ಅಧ್ಯಯನ ಅತ್ಯಗತ್ಯ. ಲ್ಯಾಟಿನ್ ಪದಗಳನ್ನು ಅನುಸರಿಸಿ ಇಂಗ್ಲಿಷ್ ಭಾಷೆಯನ್ನು ತನ್ನ ಕಾವ್ಯದಲ್ಲಿ ಬಳಸಿದ್ದಾನೆ. ಈ ಕಾರಣದಿಂದ ಆತ ಏನು ಹೇಳುತ್ತಿದ್ದಾನೆ ಎಂಬುದು ಸುಲಭವಾಗಿ ಅರ್ಥವಾಗುವುದಿಲ್ಲ ಎಂದು ತಿಳಿಸಿದರು.
ಕವಿ ಮಿಲ್ಟನ್ ಶತಮಾನಗಳುದ್ದಕ್ಕೂ ಅನೇಕ ಬಗೆಯ ಚರ್ಚೆಗಳಿಗೆ ಆಹ್ವಾನ ಕೊಟ್ಟವನು. 18ನೇ ಶತಮಾನದಲ್ಲಿ ಅತ್ಯಂತ ಪ್ರಸಿದ್ಧ ಕವಿ, ಇಂಗ್ಲಿಷ್ ಭಾಷೆಗೆ ಮಹತ್ವ ತಂದುಕೊಟ್ಟವನು ಎಂದು ಕೆಲ ವಿದ್ವಾಂಸರ ಹೊಗಳಿಕೆಗೆ ಪಾತ್ರನಾದ. ಆದರೆ, 19ನೇ ಶತಮಾನದಲ್ಲಿ ಮಿಲ್ಟನ್ ಕಾವ್ಯ ಕುರಿತಂತೆ ವಿಭಿನ್ನ ದನಿಗಳು ಕೇಳಿಬಂದವು. ಕೀಟ್ಸ್, ಎಲಿಯಟ್ ಸೇರಿದಂತೆ ಅಂದಿನ ಕಾಲದ ಪ್ರಸಿದ್ಧ ವಿಮರ್ಶಕರು, ವಿದ್ವಾಂಸರು 200 ವರ್ಷಗಳ ಕಾಲ ಇಂಗ್ಲಿಷ್ ಕಾವ್ಯ ತಪ್ಪು ದಾರಿಗೆ ಹಿಡಿಯುವಂತೆ ಮಾಡಿದ ಕವಿಯೆಂದು ಟೀಕಿಸಿದ್ದಾರೆ ಎಂದು ವಿಮರ್ಶಿಸಿದರು.
ಡಾ.ಶತಾವಧಾನಿ ಆರ್. ಗಣೇಶ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಮಿಲ್ಟನ್ ಕೃತಿಗಿಂತ ವ್ಯಕ್ತಿಯಾಗಿ ಹೆಚ್ಚಿನ ಜನರ ಮನಸ್ಸು ಮುಟ್ಟಿದ್ದು, ಅದಕ್ಕೆ ಕುವೆಂಪು ಅವರೇ ಕಾರಣಕರ್ತರಾಗಿದ್ದಾರೆ. ಕೃತಿತ್ವವನ್ನು ಮೀರಿ ವ್ಯಕ್ತಿ ನಿಲ್ಲುವುದು ಹಾಗೂ ಆತ ತನ್ನ ಕೃತಿಯಲ್ಲಿ ಏನು ಹೇಳುತ್ತಿದ್ದಾನೆ ಅನ್ನುವುದಕ್ಕಿಂತ ಅದರಾಚೆಗೆ ಘನಿಸುವಂತಾಗುವುದು ಒಂದು ಭಾಷೆಯ ಭಾಗ್ಯ. ಈ ಎಲ್ಲಾ ದೃಷ್ಟಿಯಿಂದ ಮಿಲ್ಟನ್ ಅನ್ನು ಕನ್ನಡಿಗರು ಮತ್ತೊಮ್ಮೆ ಕಾಣುವಂತಾಗಬೇಕು ಎಂದು ಆಶಿಸಿದರು.
ಕನ್ನಡದಲ್ಲಿ ಗ್ರೀಕ್ ಸಾಹಿತ್ಯದ ಆಸಕ್ತಿ ಹುಟ್ಟಿಸಿದವರಲ್ಲಿ ಗೋವಿಂದ ಪೈ, ಬಿಎಂಶ್ರೀ ಪ್ರಮುಖರು. ಮಹಾಕಾವ್ಯಗಳ ಪರಂಪರೆ ಪಾಶ್ಚಾತ್ಯ ಜಗತ್ತಿನಲ್ಲಿ ಇಲ್ಲ ಅನ್ನುವಂತಾಗಿದೆ. ತೌಲನಿಕ ಅಧ್ಯಯನಕ್ಕೆ ಕನ್ನಡದಲ್ಲಿ ಸಾಮಾಗ್ರಿಗಳು ಕಡಿಮೆ. ಇದಕ್ಕೆ ಮಹಾಕವಿ ಜಾನ್ ಮಿಲ್ಟನ್‌ನ ಕೃತಿ ಪೂರಕವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಜೋಗಿ, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ, ಲೇಖಕರು ಉಪಸ್ಥಿತರಿದ್ದರು.







