ನಾಳೆ 7 ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ

ಬೆಂಗಳೂರು, ಜೂ.2: ರಾಜ್ಯದ ಶಿವಮೊಗ್ಗ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳ 140 ವಾರ್ಡ್‌ಗಳ ಮತ ಎಣಿಕೆ ನಾಳೆ(ಜೂ.3) ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ. ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಿದ್ದ ನೆಲಮಂಗಲ ಪುರಸಭೆ ಹಾಗೂ ಸೊರಬ ಪಟ್ಟಣ ಪಂಚಾಯತ್ ಗೆ ಜೂ.1 ರಂದು ಚುನಾವಣೆ ನಡೆದಿದ್ದು, ನಾಳೆ(ಜೂ.3) ಫಲಿತಾಂಶ ಹೊರಬೀಳಲಿದೆ. ಇದರ ಜತೆಗೆ ಮೇ 29 ರಂದು ಚುನಾವಣೆ ನಡೆದು, ಮತ ಎಣಿಕೆಯಾಗದಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ ಪಟ್ಟಣ ಪಂಚಾಯತ್, ಹೊಸನಗರ ಪಟ್ಟಣ ಪಂಚಾಯತ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪುರಸಭೆಯ ಫಲಿತಾಂಶವೂ ನಾಳೆ ಪ್ರಕಟಗೊಳ್ಳಲಿದೆ.
7 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 140 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 479 ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಕಾರ್ಯ ಮುಕ್ತಾಯವಾಗಲಿದ್ದು, ಸಂಜೆಗೆ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ. ಈಗಾಗಲೇ 30 ಪುರಸಭೆಗಳು, 19 ಪಟ್ಟಣ ಪಂಚಾಯತ್ ಗಳು ಸೇರಿದಂತೆ 59 ನಗರ ಸ್ಥಳೀಯ ಸಂಸ್ಥೆಗಳ 1221 ವಾರ್ಡ್‌ಗಳಿಗೆ ನಡೆದಿದ್ದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, 509 ಕಾಂಗ್ರೆಸ್, 336 ಬಿಜೆಪಿ, 174 ಜೆಡಿಎಸ್, 2 ಸಿಪಿಎಂ, 3 ಬಿಎಸ್ಪಿ, 7 ಇತರರು ಹಾಗೂ 160 ಪಕ್ಷೇತರ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.
ಸೈಕಲ್ ಬಳಸಿ ಆರೋಗ್ಯ ಸುಧಾರಿಸಿಕೊಳ್ಳಿ: ಸೌಮ್ಯಾರೆಡ್ಡಿ ಬೆಂಗಳೂರು, ಜೂ.2: ಸೈಕಲ್ ಬಳಸುವುದರಿಂದ ಇಂಧನ ಉಳಿಸುವ ಜತೆಗೆ ಪರಿಸರ ಸಂರಕ್ಷಣೆ ಮಾಡಬಹುದು. ಹೀಗಾಗಿ ನಗರದ ಜನತೆ ಸೈಕಲ್ ಬಳಸುವುದರ ಮೂಲಕ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ತಿಳಿಸಿದರು.
ರವಿವಾರ ಸೈಕಲ್‌ವರ್ಡ್ ವತಿಯಿಂದ ವಿಶ್ವ ಸೈಕಲ್ ದಿನದ ಅಂಗವಾಗಿ ಸೈಕಲ್‌ನ ಮಹತ್ವ ಸಾರುವ ಉದ್ದೇಶದಿಂದ ಜಯನಗರದ 4ನೆ ಬ್ಲಾಕ್‌ನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಿಂದ ಕಬ್ಬನ್‌ಪಾರ್ಕ್‌ವರೆಗೆ ಆಯೋಜಿಸಿದ್ದ ಬೃಹತ್ ಸೈಕಲ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸೈಕಲ್ ಬಳಕೆಯಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚೆಗೆ ನಗರ ಪ್ರದೇಶದ ಜನರನ್ನು ಕಾಡುತ್ತಿರುವ ರಕ್ತದೊತ್ತಡ, ಅಧಿಕ ರಕ್ತದೊತ್ತಡ, ಮದುಮೇಹ ಮತ್ತಿತರ ದೈಹಿಕ ಸಮಸ್ಯೆಗಳಿಗೆ ಪರಿಹಾರವಾಗಿದೆ. ಸೈಕಲ್ ಬಳಕೆಯಿಂದ ದೇಹದ ನರನಾಡಿಗಳಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುವುದರಿಂದ ದೇಹ ಉಲ್ಲಾಸದಿಂದಿರುತ್ತದೆ ಎಂದು ಅವರು ಹೇಳಿದರು.
ಬಿಬಿಎಂಪಿ ಸದಸ್ಯ ಎನ್.ನಾಗರಾಜು ಮಾತನಾಡಿ, ಕಳೆದ ಹದಿನೈದು ವರ್ಷಗಳ ಹಿಂದೆ ನಗರದ ಜನತೆ ಹೆಚ್ಚಿನ ಪ್ರಮಾಣದಲ್ಲಿ ಸೈಕಲ್ ಬಳಸುತ್ತಿದ್ದರು. ಬಹುತೇಕ ಪ್ರತಿಯೊಂದು ಮನೆಯಲ್ಲೂ ಸೈಕಲ್‌ಗಳಿದ್ದವು. ಕ್ರಮೇಣ ವಾಹನಗಳ ಭರಾಟೆ ಹೆಚ್ಚಾಗಿ ವಾಯು ಮಾಲೀನ್ಯ, ಶಬ್ಧ ಮಾಲೀನ್ಯ ತೀವ್ರಗೊಂಡಿತು. ಆದರೆ, ಜನರಿಗೆ ಇದೀಗ ಸೈಕಲ್‌ನ ಮಹತ್ವದ ಅರಿವಾಗುತ್ತಿದೆ ಎಂದರು.
ಸೈಕಲ್ ಬಳಸಿ - ಜಾಗೃತಿ ಮೂಡಿಸಿ ಎನ್ನುವ ಅಭಿಯಾನದೊಂದಿಗೆ ಪಾಲ್ಗೊಂಡಿದ್ದ ಸೈಕಲ್ ಸರವಾರರು ಜನರತ್ತ ಕೈ ಬೀಸಿ ನೀವು ಬನ್ನಿ, ಸೈಕಲ್ ತನ್ನಿ ಎಂದು ಜನ ಸಾಮಾನ್ಯರನ್ನು ಹುರಿದುಂಬಿಸುತ್ತಿದ್ದರು. ಆರೋಗ್ಯ ಕಾಪಾಡಲು ಸೈಕಲ್ ಬಳಕೆ ಅತ್ಯುತ್ತಮವಾಗಿದ್ದು, ದಿನನಿತ್ಯದ ಚಟುವಟಿಕೆಗಳಿಗೆ ಸೈಕಲ್ ಅತ್ಯಂತ ಪ್ರಭಾವಶಾಲಿ ಸಂಚಾರಿ ಸಾಧನವಾಗಿದೆ ಎಂದು ಜಾಥದಲ್ಲಿ ಪಾಲ್ಗೊಂಡಿದ್ದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.







