ಅಪರೂಪದ ಸಾಧನೆ ಮಾಡಿದ ಇಮ್ರಾನ್ ತಾಹಿರ್

ಲಂಡನ್, ಜೂ.2: ಹಿರಿಯ ಲೆಗ್-ಸ್ಪಿನ್ನರ್ ಇಮ್ರಾನ್ ತಾಹಿರ್ ದಕ್ಷಿಣ ಆಫ್ರಿಕ ಪರ ರವಿವಾರ 100ನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿದರು. ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನಾಡುವ ಮೂಲಕ ಅವರು ಈ ಅಪರೂಪದ ಸಾಧನೆ ಮಾಡಿದರು.
40ರ ಹರೆಯದ ತಾಹಿರ್ ಅವರು ದ.ಆಫ್ರಿಕ ಪರ 100 ಏಕದಿನ ಪಂದ್ಯಗಳನ್ನಾಡಿದ ಎರಡನೇ ಸ್ಪೆಷಲಿಷ್ಟ್ ಸ್ಪಿನ್ನರ್ ಆಗಿದ್ದಾರೆ. ಈ ಹಿಂದೆ ನಿಕಿ ಬೊಯೆ ಈ ಸಾಧನೆ ಮಾಡಿದ್ದರು. 2011ರಲ್ಲಿ ಉಪಖಂಡದಲ್ಲಿ ನಡೆದ ವಿಶ್ವಕಪ್‌ನ ವೇಳೆ ಚೊಚ್ಚಲ ಪಂದ್ಯವನ್ನಾಡಿದ ತಾಹಿರ್ ದ.ಆಫ್ರಿಕ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿದ್ದಾರೆ. 31ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 164 ವಿಕೆಟ್‌ಗಳನ್ನು ಪಡೆದಿದ್ದಾರೆ.
ತಾಹಿರ್ ವಿಶ್ವಕಪ್ ಪಂದ್ಯವನ್ನಾಡುತ್ತಿರುವ ದ.ಆಫ್ರಿಕದ ಹಿರಿಯ ವಯಸ್ಸಿನ ಆಟಗಾರನಾಗಿದ್ದಾರೆ. ತನ್ನ 8 ವರ್ಷಗಳ ವೃತ್ತಿಜೀವನದಲ್ಲಿ ದಕ್ಷಿಣ ಆಫ್ರಿಕ ಪರ ಶ್ರೇಷ್ಠ ಏಕದಿನ ಬೌಲಿಂಗ್(7-45)ಮಾಡಿದ್ದರು. ಅತ್ಯಂತ ವೇಗವಾಗಿ 100 ವಿಕೆಟ್‌ಗಳನ್ನು ಪೂರೈಸಿದ ದಕ್ಷಿಣ ಆಫ್ರಿಕದ ಲೆಗ್ ಸ್ಪಿನ್ನರ್ ಆಗಿದ್ದಾರೆ. ಮೇ 30 ರಂದು ಇಂಗ್ಲೆಂಡ್ ವಿರುದ್ಧ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಹೊಸ ಚೆಂಡಿನೊಂದಿಗೆ ಬೌಲಿಂಗ್ ದಾಳಿ ಆರಂಭಿಸಿದ ಮೊದಲ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
‘‘ನನಗೆ ನಿಜವಾಗಿಯೂ ಇದೊಂದು ವಿಶೇಷ ಅನುಭವ. 2011ರ ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಿದ್ದೆ. ಇದೊಂದು ಅದ್ಭುತ ಪಯಣ. ಕ್ರಿಕೆಟ್ ಆಡಬೇಕೆಂಬ ಕನಸಿತ್ತು. ಆದರೆ, ದಕ್ಷಿಣ ಆಫ್ರಿಕ ಪರವಾಗಿ 100 ಪಂದ್ಯ ಆಡುತ್ತೇನೆಂದು ಯೋಚಿಸಿರಲಿಲ್ಲ. ಕ್ರಿಕೆಟ್ ದಕ್ಷಿಣ ಆಫ್ರಿಕ ನನಗೆ ನೀಡಿರುವ ಅಮೂಲ್ಯ ಗೌರವ ಇದಾಗಿದೆ. ನಾನು ಎಲ್ಲರಿಗೂ ಆಭಾರಿಯಾಗಿದ್ದೇನೆ’’ ಎಂದು ತಾಹಿರ್ ಹೇಳಿದ್ದಾರೆ.







