ಪಾಕ್ ಮೇಲೆ ಸವಾರಿಗೆ ಇಂಗ್ಲೆಂಡ್ ತಯಾರಿ

ಟ್ರೆಂಟ್‌ಬ್ರಿಡ್ಜ್, ಜೂ.2: ಇಂಗ್ಲೆಂಡ್ ತಂಡ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಎರಡು ಬಾರಿ ಗರಿಷ್ಠ ಮೊತ್ತ ಗಳಿಸಿದ, ಬ್ಯಾಟಿಂಗ್‌ಗೆ ಸ್ವರ್ಗ ಎನಿಸಿರುವ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಸೋಮವಾರ ನಡೆಯಲಿರುವ ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.
ಸರ್ಫರಾಝ್ ಅಹ್ಮದ್ ನಾಯಕತ್ವದ ಪಾಕ್ ತಂಡ ಶುಕ್ರವಾರ ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದ ತನ್ನ ಮೊದಲ ವಿಶ್ವಕಪ್ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಶರಣಾಗಿ ಮುಜುಗರ ಅನುಭವಿಸಿದೆ. ವಿಂಡೀಸ್‌ನ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿ ಹೋಗಿದ್ದ ಪಾಕಿಸ್ತಾನ 21.4 ಓವರ್‌ಗಳಲ್ಲಿ 105 ರನ್ ಗಳಿಸುವಷ್ಟರಲ್ಲಿ ಸರ್ವಪತನಗೊಂಡಿತ್ತು.
ಇಲ್ಲಿನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 2016ರಲ್ಲಿ ಪಾಕಿಸ್ತಾನ ವಿರುದ್ಧ 3 ವಿಕೆಟ್‌ಗಳ ನಷ್ಟಕ್ಕೆ 444 ರನ್ ಗಳಿಸಿತ್ತು. 2018ರಲ್ಲಿ ಆಸ್ಟ್ರೇಲಿಯ ವಿರುದ್ಧ 6 ವಿಕೆಟ್‌ಗೆ 481 ರನ್ ಕಲೆ ಹಾಕಿದೆ. ಇದು ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಸ್ಕೋರಾಗಿದೆ.
ಇಯಾನ್ ಮೊರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು 104 ರನ್‌ಗಳಿಂದ ಮಣಿಸಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಜೇಸನ್ ರಾಯ್, ಜೋ ರೂಟ್ ಹಾಗೂ ಇಯಾನ್ ಮೊರ್ಗನ್ ಅರ್ಧಶತಕ ಸಿಡಿಸಿದ್ದರು. ಬೆನ್ ಸ್ಟೋಕ್ಸ್ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು. ಪಾಕಿಸ್ತಾನ ತಂಡ ವಿಂಡೀಸ್ ವಿರುದ್ಧ ಆ್ಯಂಡ್ರೆ ರಸೆಲ್ ಹಾಗೂ ಒಶಾನೆ ಥಾಮಸ್‌ರ ಶಾರ್ಟ್-ಪಿಚ್ ಬೌಲಿಂಗ್ ಎದುರಿಸಲು ಪರದಾಟ ನಡೆಸಿದ್ದನ್ನು ಗಮನಿಸಿರುವ ಇಂಗ್ಲೆಂಡ್ ಸಸ್ಸೆಕ್ಸ್ ವೇಗದ ಬೌಲರ್‌ಜೊಫ್ರಾ ಅರ್ಚರ್,ಲಿಯಾಮ್ ಪ್ಲಂಕೆಟ್‌ಗೆ ಸಾಥ್ ನೀಡಲು ವೇಗದ ಬೌಲರ್ ಮಾರ್ಕ್ ವುಡ್‌ರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಮಂಡಿನೋವಿನಿಂದ ಬಳಲುತ್ತಿರುವ ವುಡ್ ಈ ವರ್ಷ ಕೇವಲ 13.1 ಓವರ್‌ಗಳ ಬೌಲಿಂಗ್ ಮಾಡಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಬೇಗನೆ ನಿರ್ಗಮಿಸಿ ಮುಖಭಂಗಕ್ಕೀಡಾದ ಬಳಿಕ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡಿದ್ದು ಇದೀಗ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದೆ. ದ.ಆಫ್ರಿಕ ವಿರುದ್ಧ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 311 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ಅರ್ಚರ್ ನೇತೃತ್ವದ ಉತ್ತಮ ಬೌಲಿಂಗ್ ನೆರವಿನಿಂದ ಆಫ್ರಿಕ ದಾಂಡಿಗರನ್ನು ಬೇಗನೆ ಕಟ್ಟಿಹಾಕಿತ್ತು. ಏಕದಿನ ಕ್ರಿಕೆಟ್‌ನಲ್ಲಿ 500ಕ್ಕೂ ಅಧಿಕ ರನ್ ಗಳಿಸುವುದು ಅಸಾಧ್ಯ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇಂಗ್ಲೆಂಡ್‌ನ ಪ್ರಚಂಡ ಬ್ಯಾಟಿಂಗ್ ನೋಡಿದರೆ ಇದು ಅಸಾಧ್ಯವೆನಿಸದು. ಇಂಗ್ಲೆಂಡ್ ಸೋಮವಾರ ಮೊದಲು ಬ್ಯಾಟಿಂಗ್‌ಗೆ ಅವಕಾಶ ಪಡೆದರೆ ದೊಡ್ಡ ಮೊತ್ತ ಗಳಿಸಲು ಯತ್ನಿಸಬಹುದು.
ಪಾಕಿಸ್ತಾನ ಕಳೆದ 11 ಏಕದಿನ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ. ಇದರಲ್ಲಿ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ 0-4 ಅಂತರದ ಸೋಲು ಕೂಡ ಸೇರಿದೆ. ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್‌ನ್ನು ಮಣಿಸಲು ಭಾರೀ ಬೆವರಿಳಿಸಬೇಕಾಗಿದೆ. ಈ ಹಿಂದೆ ಪಾಕ್‌ನ ಬ್ಯಾಟಿಂಗ್ ವೈಫಲ್ಯವನ್ನು ಬೌಲರ್‌ಗಳು ಉತ್ತಮ ಪ್ರದರ್ಶನದಿಂದ ಮರೆಮಾಚುತ್ತಿದ್ದರು. ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ನಡೆದ ಏಕದಿನ ಸರಣಿಯ ವೇಳೆ ಪಾಕ್ ಬೌಲರ್‌ಗಳು ಸತತ 4 ಬಾರಿ ಇಂಗ್ಲೆಂಡ್‌ಗೆ 340ಕ್ಕೂ ಅಧಿಕ ರನ್ ಬಿಟ್ಟುಕೊಟ್ಟು ಕೈಸುಟ್ಟುಕೊಂಡಿದ್ದರು.
ಈ ವರ್ಷದ ವಿಶ್ವಕಪ್‌ನಲ್ಲಿ ಈ ತನಕ ನಡೆದಿರುವ ಪಂದ್ಯಗಳು ಏಕಪಕ್ಷೀಯವಾಗಿ ಸಾಗಿವೆ. ಕ್ರಿಕೆಟ್ ಅಭಿಮಾನಿಗಳು ಪೈಪೋಟಿಯ ಪಂದ್ಯಕ್ಕೆ ಸಾಕ್ಷಿಯಾಗಲು ಎದುರು ನೋಡುತ್ತಿದ್ದಾರೆ.







