ಶಿಕ್ಷಣ ವ್ಯವಸ್ಥೆಯಲ್ಲಿ ‘ಹಿಂದಿ’ಯ ಬಲವಂತ ಹೇರಿಕೆ ಸರಿಯಲ್ಲ: ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರೊ. ರಾಧಾಕೃಷ್ಣ
ಮಂಗಳೂರು, ಜೂ.3: ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಚುನಾವಣೆಗೆ ಮುನ್ನ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರಕಾರವು ಇತ್ತೀಚೆಗಷ್ಟೇ ಬಹಿರಂಗ ಪಡಿಸಿದೆ. ಆ ವರದಿಯ ಪ್ರಕಾರ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳಲು ಶಿಫಾರಸು ಮಾಡಿದೆ. ಆದರೆ ಬಹುಭಾಷೆ ಮತ್ತು ಬಹುಸಂಸ್ಕೃತಿಯ ನಾಡಿನಲ್ಲಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡುವುದು ಸಮಂಜಸವಲ್ಲ. ಇದಕ್ಕೆ ಕಾಂಗ್ರೆಸ್‌ನಿಂದ ತೀವ್ರ ವಿರೋಧವಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರೊ. ರಾಧಾಕೃಷ್ಣ ಹೇಳಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು ಮಾನವ ಸಂಪನ್ಮೂಲ ಸಚಿವಾಲಯವು ಹೊರಡಿಸಿರುವ ನೂತನ ಶಿಕ್ಷಣ ಕರಡು ನೀಡಿಯಲ್ಲಿ ಹಿಂದಿಯನ್ನು ಹೇರಿಕೆ ಮಾಡಿರುವುದು ಖಂಡನೀಯ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಶಿಕ್ಷಣ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದರು. ಇದೀಗ ಮತ್ತಷ್ಟು ಬದಲಾವಣೆಯ ನಿಟ್ಟಿನಲ್ಲಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು ಸರಕಾರಕ್ಕೆ ಕೆಲವು ಅಂಶಗಳನ್ನು ಶಿಫಾರಸು ಮಾಡಿದೆ. ಅದರ ಪ್ರಕಾರ ಹಿಂದಿಯನ್ನು ಕಲಿಯುವುದು ಕಡ್ಡಾಯವಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಆಡಳಿತ ಭಾಷೆಗಳಾದ ಕನ್ನಡ, ಮಲಯಾಳಂ, ತಮಿಳು, ತೆಲುಗು ಇತ್ಯಾದಿ ಪ್ರಾದೇಶಿಕ ಭಾಷೆಗಳನ್ನು ಕಲಿಯಲು ಉತ್ತರ ಭಾರತೀಯರು ಹಿಂದೇಟು ಹಾಕುತ್ತಾರೆ. ಅವರಿಗೆ ಈ ಭಾಷೆಗಳ ಮೇಲೆ ಗೌರವ ಇಲ್ಲ ಎಂದಾದ ಮೇಲೆ ದಕ್ಷಿಣ ಭಾರತೀಯರು ಹಿಂದಿ ಕಲಿಯಲು ಯಾಕೆ ಆಸಕ್ತಿ ವಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕರಿಯನ್ ಅವರ ಡಾಕ್ಟರೇಟ್ ಪದವಿ ವಿವಾದದಲ್ಲಿದೆ. ಇಂತಹ ವಿವಾದಿತ ವ್ಯಕ್ತಿಯನ್ನು ಮಾನವ ಸಂಪನ್ಮೂಲ ಸಚಿವರನ್ನಾಗಿಸಿರುವುದು ಅಕ್ಷಮ್ಯ. ಇಂತಹವರಿಂದ ಶಿಕ್ಷಣ ವ್ಯವಸ್ಥೆ ಹದಗೆಡಬಹುದಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಈ ಸಚಿವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರೊ. ರಾಧಾಕೃಷ್ಣ ಆಗ್ರಹಿಸಿದರು.
ಐಎಎಸ್ ಅಧಿಕಾರಿಯ ಬಾಲಿಶ ಹೇಳಿಕೆ: ಮಹಾರಾಷ್ಟ್ರದ ಐಎಎಸ್ ಅಧಿಕಾರಿ ನಿಧಿ ಚೌಧರಿ ಇತ್ತೀಚೆಗೆ ಮಹಾತ್ಮಾ ಗಾಂಧೀಜಿಯ ಬಗ್ಗೆ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಒಬ್ಬ ಹಿರಿಯ ಸರಕಾರಿ ಅಧಿಕಾರಿಯಾಗಿದ್ದುಕೊಂಡು ಜವಾಬ್ದಾರಿಯುತ ಸ್ಥಾನದಲ್ಲಿರುವ ನಿಧಿ ಚೌಧರಿ ಇಂತಹ ಹೇಳಿಕೆ ನೀಡಬಾರದಿತ್ತು. ಹಾಗಾಗಿ ಕೇಂದ್ರ ಸರಕಾರ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ಶಾಸಕರು ಸದನದಲ್ಲಿ ಧ್ವನಿ ಎತ್ತಲಿ: ದ.ಕ.ಜಿಲ್ಲೆಯ ನೀರಿನ ಸಮಸ್ಯೆಯ ಬಗ್ಗೆ ಬಿಜೆಪಿಯ ಶಾಸಕರು ವಿನಾ ಕಾರಣ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಚಿವರ ವಿರುದ್ಧ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ವಿಪಕ್ಷದ ಶಾಸಕರೂ ಕೂಡ ಸರಕಾರದ ಭಾಗವೇ ಆಗಿದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಯ ಬಗ್ಗೆ ಸದನದಲ್ಲಿ ಧ್ವನಿ ಎತ್ತಲಿ ಎಂದು ಆಗ್ರಹಿಸಿದರು.
ಚುನಾವಣಾ ಫಲಿತಾಂಶ ಅಚ್ಚರಿ: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಿಗೆ ರಾಜ್ಯದ ವಿವಿಧ ಕಡೆ ನಡೆದ ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶವೂ ಪ್ರಕಟವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಲೀಡ್ ತಂದುಕೊಟ್ಟ ವಾರ್ಡ್‌ಗಳಲ್ಲಿ ಇದೀಗ ಕಾಂಗ್ರೆಸ್‌ಗೆ ಲೀಡ್ ಸಿಕ್ಕಿದೆ. ಕೇವಲ ಒಂದೇ ವಾರದಲ್ಲಿ ಸ್ಥಳೀಯಾಡಳಿತದ ಚುನಾವಣೆಯಲ್ಲಿ ಮತದಾರ ಇಂತಹ ಬದಲಾವಣೆಯ ನಿರ್ಧಾರ ಕೈಗೊಳ್ಳಲು ಸಾಧ್ಯವಿದೆ. ಹಾಗಾಗಿ ಇವಿಎಂ ಬಗ್ಗೆ ಹೆಚ್ಚುತ್ತಿರುವ ಗುಮಾನಿಗೆ ಇದು ಮತ್ತಷ್ಟು ಪುಷ್ಠಿ ನೀಡುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಡಿಸಿಸಿ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ನೀರಜ್ ಪಾಲ್, ಟಿ.ಕೆ.ಸುಧೀರ್, ಡಿಸಿಸಿ ವಕ್ತಾರ ಎ.ಸಿ.ವಿನಯರಾಜ್ ಉಪಸ್ಥಿತರಿದ್ದರು.







