ಮುಹಮ್ಮದ್ ಸಲಾಹ್ ರ ರಮಝಾನ್ ಉಪವಾಸ ಆಚರಣೆ ಬಗ್ಗೆ ಲಿವರ್ ಪೂಲ್ ಮ್ಯಾನೇಜರ್ ಹೇಳಿದ್ದು ಹೀಗೆ…

ಪ್ರತಿಷ್ಠಿತ ಯುಎಫ್‍ಎಫ್‍ಎ ಚಾಂಪಿಯನ್ಸ್ ಲೀಗ್ ನಲ್ಲಿ ಲಿವರ್ ಪೂಲ್ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ವಿಜೇತ ತಂಡದ ಮ್ಯಾನೇಜರ್ ಜರ್ಗನ್ ಕ್ಲಾಪ್ಪ್ ಅವರು ತಮ್ಮ ತಂಡದ ಇಬ್ಬರು ಮುಸ್ಲಿಂ ಆಟಗಾರರಾದ ಮುಹಮ್ಮದ್ ಸಲಾಹ್ ಹಾಗೂ ಸದಿಯೋ ಮೇನ್ ಅವರ ರಮಝಾನ್ ಉಪವಾಸ ಆಚರಣೆ ಕುರಿತಂತೆ ಆಡಿರುವ ಮಾತುಗಳು ಮೆಚ್ಚುಗೆಗೆ ಪಾತ್ರವಾಗಿದೆ.
ಪವಿತ್ರ ರಮಝಾನ್ ತಿಂಗಳಲ್ಲಿ ಸಂಪ್ರದಾಯದಂತೆ ತಮ್ಮ ತಂಡದ ಮುಸ್ಲಿಂ ಆಟಗಾರರು ಉಪವಾಸ ಆಚರಿಸುತ್ತಿರುವುದರಿಂದ ಹಾಗೂ ಫೈನಲ್ ಪಂದ್ಯದ ದಿನದಂದೂ ಉಪವಾಸ ಆಚರಿಸುವ ಬಗ್ಗೆ ತನಗೆ ಯಾವ ಸಮಸ್ಯೆಯೂ ಇಲ್ಲವೆಂದು ಕ್ಲಾಪ್ಪ್ ಹೇಳಿದ್ದರು.
ಇಸ್ಲಾಮಿಕ್ ಸಂಪ್ರದಾಯಗಳನ್ನು ಗೌರವಿಸುವುದಾಗಿ ಹೇಳಿದ ಕ್ಲಾಪ್ಪ್, ರಮಝಾನ್ ಪೂರ್ವ ಹಾಗೂ ರಮಝಾನ್ ಸಂದರ್ಭ ತಮ್ಮ ಇಬ್ಬರು ಆಫ್ರಿಕನ್ ಮುಸ್ಲಿಂ ತಾರಾ ಆಟಗಾರರ ನಿರ್ವಹಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
“ನನ್ನ ಆಟಗಾರರ ಉಪವಾಸದಿಂದ ನನಗೆ ಯಾವುದೇ ಸಮಸ್ಯೆಯಿಲ್ಲ. ನಾನು ಅವರ ಧರ್ಮವನ್ನು ಗೌರವಿಸುತ್ತೇನೆ. ಅವರು ಉಪವಾಸ ಆಚರಿಸಿದಾಗಲೂ, ಆಚರಿಸದೇ ಇದ್ದಾಗಲೂ ಅತ್ಯುತ್ತಮವಾಗಿ ಆಟವಾಡಿದ್ದಾರೆ. ಪ್ರಾರ್ಥನೆ ಸಲ್ಲಿಸಲಿದ್ದುದರಿಂದ ಹಲವು ದಿನ ಮೇನ್ ಅಥವಾ ಸಲಾಹ್ ಡ್ರೆಸ್ಸಿಂಗ್ ರೂಮ್ ಗೆ ತಡವಾಗಿ ಆಗಮಿಸಿದ್ದುಂಟು. ಫುಟ್ಬಾಲ್ ಗಿಂತಲೂ ಹಲವು ಪ್ರಮುಖ ವಿಚಾರಗಳಿವೆ'' ಎಂದು ಜರ್ಗನ್ ಕ್ಲಾಪ್ಪ್ ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ಸಲಾಹ್ ಅವರ ಗೋಲ್ ಲಿವರ್ ಪೂಲ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.







