ವಿಕಲಚೇತನ ಮಹಿಳೆಯ ಸ್ವಾವಲಂಬನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೆರವು

ಬೆಂಗಳೂರು, ಜೂ. 3: ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ವಿಕಲಚೇತನ ಮಹಿಳೆಯ ಸ್ವಾವಲಂಬನೆ ಬದುಕಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ 50 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ.
ಸೋಮವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಮಾಯಕ್ಕ ಹುಟ್ಟಿನಿಂದಲೇ ವಿಕಲಚೇತನ ಮಹಿಳೆ. ಓದು, ಬರಹವೂ ಇಲ್ಲ. ಎರಡು ಮಕ್ಕಳ ತಾಯಿ ಮಾಯಕ್ಕನನ್ನು ಪತಿ ತೊರೆದಾಗ ತೆವಳಿಕೊಂಡೇ ಅರ್ಧಮೈಲು ದೂರ ತೆರಳಿ ಕಸ-ಮುಸುರೆ ಮಾಡಿ ಹೊಟ್ಟೆ ಹೊರೆಯುವ ಅನಿವಾರ್ಯತೆ ಎದುರಾಯಿತು. ಸಂಕಷ್ಟದಿಂದ ಪಾರಾಗಲು ಮುಖ್ಯಮಂತ್ರಿ ಮನೆ ಬಾಗಿಲು ಬಡಿದಳು. ಅವಳ ಬವಣೆ ನೋಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವ ಉದ್ಯೋಗ ಕೈಗೊಳ್ಳಲು 50 ಸಾವಿರ ರೂ. ಗಳ ನೆರವು ಒದಗಿಸಿದರು. ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಈಕೆಗೆ ಪಡಿತರ ಚೀಟಿ, ಮತ್ತಿತರ ಪೂರಕ ಸೌಲಭ್ಯ ಒದಗಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಸೂಚಿಸಿದರು. ಚೆಕ್ ಪಡೆದು ಹೊರಬಂದ ಮಾಯಕ್ಕಳ ಮುಖದಲ್ಲಿ ವಿಶ್ವಾಸದ ನಗೆ. ‘ನಾನೂ ಕಿರಾಣಿ ಅಂಗಡಿ ಮಾಡ್ತೇನ್ರಿ’ ಎನ್ನುವಾಗ ಕಣ್ಣಲ್ಲಿ ಮಿಂಚು ಎದ್ದು ಕಾಣುತ್ತಿತ್ತು.





