ಜಾತಿ ವಿನಾಶಕ್ಕೆ ಬುದ್ದ, ಬಸವಣ್ಣ, ಅಂಬೇಡ್ಕರ್ ಚಿಂತನೆ ಪೂರಕ: ಕವಿ ಸಿದ್ದಲಿಂಗಯ್ಯ

ಬೆಂಗಳೂರು, ಜೂ.3: ಜಾತಿ ಪದ್ದತಿ, ಮೌಢ್ಯತೆಯ ವಿನಾಶಕ್ಕೆ ಬುದ್ಧ, ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ಮಾರ್ಗೋಪಾಯವಾಗಬಲ್ಲದು ಎಂದು ಹಿರಿಯ ಕವಿ ಸಿದ್ಧಲಿಂಗಯ್ಯ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನನಭಾರತಿ ಆವರಣದಲ್ಲಿ ರಾಜ್ಯಶಾಸ್ತ್ರ ವಿಭಾಗವು ಡಾ.ಬಿ.ಆರ್.ಅಂಬೇಡ್ಕರ್‌ಅವರ 128ನೆ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತಿಗೂ ಸಮಾಜದಲ್ಲಿ ಜಾತಿ ಹಾಗೂ ಮೌಢ್ಯತೆಗಳು ಮಿತಿ ಮೀರಿವೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಚಿಂತನೆಗಳನ್ನು ಬದುಕಿನ ಭಾಗವಾಗಿಸಿಕೊಳ್ಳಬೇಕೆಂದು ತಿಳಿಸಿದರು.
ಭೂಗರ್ಭಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಜೆ.ರೇಣುಕಾ ಪ್ರಸಾದ್ ವಿಭಾಗದ ’ಅಶೋಕವನ’ವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಔಷಧೀಯ ಸಸ್ಯತೋಟವನ್ನು ಮಾಡಬೇಕು. ಹಾಗೂ ಎರಡೆರಡು ಗಿಡಗಳನ್ನು ಉಳಿಸಿ ಬೆಳಸಬೇಕು ಎಂದು ಮನವಿ ಮಾಡಿದರು,
ಗ್ರಂಥಪಾಲಕ ರಾಧಾಕೃಷ್ಣ ಮಾತನಾಡಿ, ಸಾಂಪ್ರದಾಯಿಕ ಗ್ರಂಥಾಲಯಗಳು ಕಣ್ಮರೆಯಾಗುತ್ತಿವೆ. ಇ-ಜರ್ನಲ್ ಮೂಲಕ ಜಗತ್ತಿನಲ್ಲಿ ಎಲ್ಲ ವಿಷಯ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನದ ಅರಿವನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಧ್ಯಪಕ ಪ್ರೊ. ಜೀವನ್‌ಕುಮಾರ್ ವಿಶೇಷ ಉಪನ್ಯಾಸ ನೀಡಿದರು. ಪ್ರೊ.ಕೆ.ಎಚ್.ಚೆಲುವರಾಜು ಉಪನ್ಯಾಸ ಕೊಠಡಿಯನ್ನು ಉದ್ಘಾಟಿಸಿದರು.







