ಚಿಣ್ಣರ ಸಂತರ್ಪಣೆ ಫಲಾನುಭವಿ ಶಾಲಾ ಮಕ್ಕಳ ಸಮಾವೇಶ
ರಥಬೀದಿಯಲ್ಲಿ ಮಠದ ಬ್ರಹ್ಮರಥ ಎಳೆದ ಮಕ್ಕಳು

ಉಡುಪಿ, ಜೂ.3: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಸುವರ್ಣಗೋಪುರ ಸಮರ್ಪಣೆ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಶ್ರೀಕೃಷ್ಣ ಚಿಣ್ಣರ ಸಂತರ್ಪಣೆ ಫಲಾನುಭವಿ ಶಾಲಾ ಮಕ್ಕಳ ಸಮಾವೇಶವನ್ನು ಮಠದ ರಥಬೀದಿಯಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಮಾತನಾಡಿ, ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಒಳ್ಳೆಯ ಆಹಾರ ಹಾಗೂ ವಸ್ತ್ರ ಅಗತ್ಯ. ನಾವು ಧರಿಸುವ ವಸ್ತ್ರ ನಮ್ಮ ಸಂಸ್ಕಾರ, ವ್ಯಕ್ತಿತ್ವವನ್ನು ತೋರಿಸಿ ಕೊಡುತ್ತದೆ. ವಸ್ತ್ರಕ್ಕೆ ಎಷ್ಟು ಮಹತ್ವವಿದೆಯೋ ನಾವು ತಿನ್ನುವ ಆಹಾರಕ್ಕೂ ಅಷ್ಟೇ ಮಹತ್ವವಿದೆ. ಒಳ್ಳೆಯ ಸಾತ್ವಿಕ ಆಹಾರವನ್ನು ಸೇವಿಸಿದರೆ ಬುದ್ಧಿಮಟ್ಟವೂ ಚೆನ್ನಾಗಿ ಬೆಳೆಯುತ್ತದೆ ಎಂದು ಹೇಳಿದರು.
ನಮ್ಮ ಬುದ್ಧಿಮಟ್ಟ ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆ. ನಾವು ತಿನ್ನುವ ಆಹಾರ ಸಾತ್ವಿಕತೆಯಿಂದ ಕೂಡಿರದಿದ್ದರೆ, ನಮ್ಮ ಬುದ್ಧಿಯೂ ಕೆಡುತ್ತದೆ ಎಂಬುವುದನ್ನು ಮಹಾಭಾರತ ತೋರಿಸಿಕೊಟ್ಟಿದೆ. ಹಾಗೆಯೇ ಸಾತ್ವಿಕ ಆಹಾರ ಸೇವಿಸಿದರೆ ನಮ್ಮ ಬುದ್ಧಿಯೂ ಸಾತ್ವಿಕತೆಯಿಂದ ಕೂಡಿರುತ್ತದೆ ಎಂಬುವುದನ್ನು ರಾಮಾಯಣ ತಿಳಿಸುತ್ತದೆ ಎಂದು ಅವರು ಹೇಳಿದರು.
ಮಕ್ಕಳಿಗೆ ಸಮವಸ್ತ್ರ ವಿತರಿಸಿದ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ಊರಿನಲ್ಲಿ ಶಾಲೆ ಹಾಗೂ ದೇಗುಲ ಇರಬೇಕು. ಮನುಷ್ಯನಿಗೆ ಹೇಗೆ ಎರಡು ಕಣ್ಣುಗಳು ಮುಖ್ಯವೋ ಅದೇ ರೀತಿ ಪ್ರತಿ ಊರಿಗೂ ಇವರೆಡು ಮುಖ್ಯ ಎಂದರು.
ಮಠದ ದಿವಾನ ವೇದವ್ಯಾಸ ತಂತ್ರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ವಾಸುದೇವ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಂದ ರಥೋತ್ಸವ: ಕಾರ್ಯಕ್ರಮದ ಕೊನೆಯಲ್ಲಿ ಚಿಣ್ಣರ ಸಂತರ್ಪಣೆಯ ಫಲಾನುಭವಿ ಪುಟ್ಟಾಣಿಗಳು ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಅಷ್ಟಮಠಾಧೀಶರೊಂದಿಗೆ ಸೇರಿ ಬ್ರಹ್ಮರಥವನ್ನು ಎಳೆದರು.








