ಎಚ್ಚರ…ಈ ಸಮಸ್ಯೆಗಳು ಮಿದುಳು ಕ್ಯಾನ್ಸರ್ ನ ಲಕ್ಷಣವಾಗಿರಬಹುದು

ಬಿಟ್ಟೂಬಿಡದೆ ತಲೆನೋವು ಕಾಡುತ್ತಿದೆಯೇ?, ಹೆಚ್ಚಿನವರು ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ತಲೆನೋವಿನ ಮಾತ್ರೆಗಳನ್ನು ಸೇವಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಿರುತ್ತಾರೆ. ಆದರೆ ನಿರಂತರವಾಗಿ ಬರುವ ತಲೆನೋವುಗಳು ಮಿದುಳು ಕ್ಯಾನ್ಸರ್ ನ ಲಕ್ಷಣವೂ ಆಗಿರಬಹುದು. ಅತ್ಯಂತ ಆಕ್ರಮಣಕಾರಿ ಮಿದುಳು ಕ್ಯಾನ್ಸರ್ ಎಂದೇ ಕುಖ್ಯಾತಿ ಪಡೆದಿರುವ ಗ್ಲಿಯೊಬ್ಲಾಸ್ಟೋಮಾ ಮಲ್ಟಿಫಾರ್ಮ್(ಜಿಬಿಎಂ) ಅತ್ಯಂತ ಮಾರಣಾಂತಿಕ ಸ್ವರೂಪದ ಗಡ್ಡೆಯಾಗಿದೆ.
ಮಿದುಳಿನ ಗಡ್ಡೆಯಲ್ಲಿI,II, III ಗ್ರೇಡ್ ಮತ್ತು IVಎಂಬ ನಾಲ್ಕು ಹಂತಗಳಿದ್ದು,ಈ ಪೈಕಿ ಗ್ರೇಡ್IV ಗ್ಲಿಯೊಬ್ಲಾಸ್ಟೋಮಾ ಆಗಿದೆ. ಇದು ಮಿದುಳಿನಲ್ಲಿಯ ಮೈಯೆಲಾನ್ ಉತ್ಪಾದಿಸುವ ಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಮೈಯೆಲಾನ್ ಮಿದುಳಿನಲ್ಲಿಯ ನರಗಳಿಗೆ ಹೊದಿಕೆಯ ರೂಪದಲ್ಲಿ ರಕ್ಷಣೆ ನೀಡುವ ಹೆಚ್ಚು ಕೊಬ್ಬನ್ನೊಳಗೊಂಡಿರುವ ರಾಸಾಯನಿಕವಾಗಿದೆ. ಚಿಕಿತ್ಸೆಯು ಗಡ್ಡೆಯ ತೀವ್ರತೆ ಮತ್ತು ಅದು ಇರುವ ಜಾಗವನ್ನು ಅವಲಂಬಿಸಿರುತ್ತದೆ. ಅನಿಯಂತ್ರಿತವಾಗಿ ವಿಭಜನೆಗೊಳ್ಳುವ ಜೀವಕೋಶಗಳು ಮಿದುಳು ಅಥವಾ ಬೆನ್ನುಹುರಿಯಲ್ಲಿ ಗಡ್ಡೆಗಳು ರೂಪುಗೊಳ್ಳಲು ಕಾರಣವಾಗುತ್ತವೆ. ಈ ವಿಧದ ಮಿದುಳಿನ ಗಡ್ಡೆಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿದೆ ಮತ್ತು ಚಿಕಿತ್ಸೆಯ ಬಳಿಕ ರೋಗಿಯ ಆಯುಷ್ಯ ತೀರ ಕಡಿಮೆಯಾಗಿರುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ಕಾರಣಗಳು ಇನ್ನೂ ಗೊತ್ತಾಗಿಲ್ಲ
ಈ ವಿಧದ ಟ್ಯೂಮರ್‌ಗೆ ನಿಖರ ಕಾರಣಗಳು ಇನ್ನೂ ಗೊತ್ತಾಗಿಲ್ಲ, ಆದರೆ ಕೆಲವು ಅಸಾಮಾನ್ಯತೆಗಳು ಈ ಮಿದುಳು ಕ್ಯಾನ್ಸರ್‌ನ್ನು ಬೆಟ್ಟು ಮಾಡುತ್ತವೆ. ವಂಶವಾಹಿ ರೂಪಾಂತರ, ವಿಕಿರಣಗಳು, ಅತ್ಯಂತ ವಿಷಕಾರಿ ರಾಸಾಯನಿಕಗಳಿಗೆ ತೆರೆದುಕೊಳ್ಳುವಿಕೆ ಮತ್ತು ವೈರಾಣು ಸೋಂಕುಗಳು ಗ್ಲಿಯೊಬ್ಲಾಸ್ಟೋಮಾ ಉಂಟಾಗಲು ತಮ್ಮ ಕೊಡುಗೆಗಳನ್ನು ಸಲ್ಲಿಸುವ ಕೆಲವು ಕಾರಣಗಳಾಗಿವೆ ಎನ್ನುತ್ತಾರೆ ತಜ್ಞರು.
ಲಕ್ಷಣಗಳು
ಬೆಳಗಿನ ಜಾವದಲ್ಲಿ ಸಂಕ್ಷಿಪ್ತ ಅವಧಿಗೆ ತಲೆನೋವುಗಳು ಮತ್ತು ವಾಕರಿಕೆ, ದೇಹದ ಒಂದು ಪಾರ್ಶ್ವದಲ್ಲಿ ದೌರ್ಬಲ್ಯ ಮತ್ತು ಸೆಳವು ಇವು ಗ್ಲಿಯೊಬ್ಲಾಸ್ಟೋಮಾದ ಲಕ್ಷಣಗಳಾಗಿವೆ.
ಶೇ.50ಕ್ಕೂ ಅಧಿಕ ಗ್ಲಿಯೊಬ್ಲಾಸ್ಟೋಮಾ ರೋಗಿಗಳು ಫಿಟ್ಸ್‌ನ ಸಮಸ್ಯೆಯನ್ನು ಅನುಭವಿಸುತ್ತಾರೆ. ರೋಗಿಯ ಜ್ಞಾಪಕ ಶಕ್ತಿ ಮತ್ತು ನರಮಂಡಲ ನಿಯಂತ್ರಣವೂ ಗಣನೀಯವಾಗಿ ತಗ್ಗಿರುತ್ತದೆ. ಇವೆಲ್ಲವೂ ಕೈಕಾಲುಗಳ ನಿಷ್ಕ್ರಿಯತೆ, ದೃಷ್ಟಿನಾಶ,ಶ್ರವಣ ಶಕ್ತಿ ಮತ್ತು ವಾಕ್‌ಶಕ್ತಿಗೆ ಹಾನಿ ಹಾಗೂ ಶರೀರದ ಅಸಮತೋಲನಕ್ಕೆ ಕಾರಣವಾಗುತ್ತವೆ.
ರೋಗನಿರ್ಣಯ ಮತ್ತು ಚಿಕಿತ್ಸೆ
ಗ್ಲಿಯೊಬ್ಲಾಸ್ಟೋಮಾ ಲಕ್ಷಣಗಳಿರುವ ರೋಗಿಗಳು ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಬೇಕಾಗುತ್ತದೆ. ಮಿದುಳಿನಲ್ಲಿ ಗಡ್ಡೆ ಪತ್ತೆಯಾದರೆ ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಬೇಕಾಗುತ್ತದೆ ಮತ್ತು ಅದನ್ನು ಪ್ರಯೋಗಶಾಲೆಗೆ ರವಾನಿಸಿ ವರದಿಗಾಗಿ ಕಾಯಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ವಿಕಿರಣ ಚಿಕಿತ್ಸೆಗೆ ಒಳಗಾಗುವುದು ಅಗತ್ಯವಾಗಿರುತ್ತದೆ ಮತ್ತು ನ್ಯುರೋಸರ್ಜನ್‌ರಿಂದ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ.
ಮುಂದಿನ ಚಿಕಿತ್ಸೆಗಾಗಿ ಮಿದುಳಿನ ಗಡ್ಡೆಯ ಸ್ವರೂಪವನ್ನು ಮತ್ತು ಅದು ಯಾವ ವೇಗದಲ್ಲಿ ಬೆಳೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೆಚ್ಚಿನ ರೋಗಿಗಳಿಗೆ ವಿಕಿರಣ ಚಿಕಿತ್ಸೆ ಮತ್ತು ಕಿಮೊಥೆರಪಿಯಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ತಲೆನೋವುಗಳು,ಸೆಳವುಗಳು,ರಕ್ತಹೀನತೆ ಮತ್ತು ಬಳಲಿಕೆ ಚಿಕಿತ್ಸೆಯ ಅಡ್ಡಪರಿಣಾಮಗಳಾಗಿರುತ್ತವೆ. ಚಿಕಿತ್ಸೆಯ ಅವಧಿಯಲ್ಲಿ ಪೋಷಕಾಂಶಗಳಿಂದ ಕೂಡಿದ ಆಹಾರ ಸೇವನೆಯು ಅಗತ್ಯವಾಗಿರುತ್ತದೆ.







