ಉಡುಪಿ: ಪೊಲೀಸ್ ಉಪನಿರೀಕ್ಷಕರಿಗೆ ಬೀಳ್ಕೊಡುಗೆ

ಉಡುಪಿ, ಜೂ.3: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವೈರಲೆಸ್ ಘಟಕಕ್ಕೆ ಪೊಲೀಸ್ ಕಾನಸ್ಟೇಬಲ್ ಆಗಿ ಸೇರ್ಪಡೆಗೊಂಡು ವೃತ್ತಿ ಜೀವನವನ್ನು ಆರಂಭಿಸಿದ ರಾಮದಾಸ್ ಆರ್ ಮೆಸ್ತ ಅವರು ಪದೋನ್ನತ್ತಿ ಹೊಂದಿ, ಪೊಲೀಸ್ ಉಪನಿರೀಕ್ಷಕರಾಗಿ ಇಲಾಖೆಯಲ್ಲಿ ಒಟ್ಟು 28 ವರ್ಷ ಸೇವೆ ಸಲ್ಲಿಸಿ ಕಳೆದ ಒಂದು ವರ್ಷದಿಂದ ಕರಾವಳಿ ಕಾವಲು ಪೊಲೀಸ್ ಕಂಟ್ರೋಲ್ ರೂಮ್, ಮಲ್ಪೆ ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸಿ ಮೇ 31ರಂದು ಸೇವೆಯಿಂದ ವಯೋನಿವೃತ್ತಿಗೊಂಡಿದ್ದು, ಇವರ ಬೀಳ್ಕೊಡುಗೆ ಸಮಾರಂಭ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿಯಲ್ಲಿ ಪೊಲೀಸ್ ಉಪಾಧೀಕ್ಷಕ ಪ್ರವೀಣ್ ಹೆಚ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮದಾಸ್ ಆರ್ ಮೆಸ್ತ, ವೃತ್ತಿಜೀವನದಲ್ಲಿ ಸಹಕಾರ ನೀಡಿದ ಎಲ್ಲಾ ಹಿರಿಯ, ಕಿರಿಯ ಹಾಗೂ ಸಹೋದ್ಯೋಗಿಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಮಂಗಳೂರು ನಗರ ಕಂಟ್ರೋಲ್ ರೂಮ್ ಪಿಎಸ್‌ಐ ಜಯಪ್ರಕಾಶ, ಉಡುಪಿ ಜಿಲ್ಲಾ ಕಂಟ್ರೋಲ್ ರೂಮ್ ಎಎಸ್‌ಐ ಅವಿನಾಶ್ ಮತ್ತು ಕರಾವಳಿ ಕಾವಲು ಕಂಟ್ರೋಲ್ ರೂಮ್ ಹೆಡ್‌ಕಾನ್‌ಸ್ಟೇಬಲ್ ಲಕ್ಷ್ಮಣ ಲಮಾಣಿ ಶುಭಕೋರಿದರು. ಪೊಲೀಸ್ ಉಪಾಧೀಕ್ಷಕ ಪ್ರವೀಣ್ ಹೆಚ್ ನಾಯಕ್ ಮತ್ತು ಕಂಟ್ರೋಲ್ ರೂಮ್ ಪ್ರಬಾರ ನಿರೀಕ್ಷಕ ಬಿ. ಮನಮೋಹನ ರಾವ್ ರಾಮದಾಸ್ ಮೆಸ್ತರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಕರಾವಳಿ ಕಾವಲು ಪೊಲೀಸ್ ಕಂಟ್ರೋಲ್ ರೂಮ್ ಉಪನಿರೀಕ್ಷಕ ಹಾಗೂ ಪ್ರಬಾರ ನಿರೀಕ್ಷಕ ಬಿ.ಮನಮೋಹನ ರಾವ್ ಸ್ವಾಗತಿಸಿದರು. ಪೊಲೀಸ್ ಕಾನ್‌ಸ್ಟೇಬಲ್ ಮುರುಗೆಪ್ಪ ಬಸಪ್ಪ ತೇಲಿ ವಂದಿಸಿ ಎಎಸ್‌ಐ ಗಣೇಶ್ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.







