ಕರ್ನಾಟಕ ಮುಕ್ತ ವಿವಿಯಲ್ಲಿ ಅವ್ಯವಹಾರ ಆರೋಪ: ತನಿಖೆಯ ಪ್ರಗತಿ ಬಗ್ಗೆ ವಿವರಣೆ ನೀಡಲು ಹೈಕೋರ್ಟ್ ಸೂಚನೆ

ಬೆಂಗಳೂರು, ಜೂ.3: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ವಿವಿಯ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ ಸೇರಿ ಮತ್ತಿತರರ ವಿರುದ್ಧ ತನಿಖೆಯ ಪ್ರಗತಿ ಬಗ್ಗೆ ವಿವರಣೆ ನೀಡಲು ಸರಕಾರಿ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ. ಈ ಕುರಿತು ಅಲ್ಪಸಂಖ್ಯಾತ, ಹಿಂದುಳಿದ ಉಪನ್ಯಾಸಕರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ವಿವಿಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರ, ನೇಮಕ, ಅಂಕಪಟ್ಟಿ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಭಕ್ತವತ್ಸಲಂ ಸಮಿತಿ ರಾಜ್ಯಪಾಲರಿಗೆ ವರದಿಯನ್ನು ಸಲ್ಲಿಸಿತ್ತು. ನಿಯಮಗಳನ್ನು ಉಲ್ಲಂಘಿಸಿ ನೇಮಕ ಹಾಗೂ ಹಣಕಾಸು ಅವ್ಯವಹಾರದ ಆರೋಪವನ್ನು ವಿವಿಯ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ, ಎಂ.ಜಿ.ಕೃಷ್ಣನ್ ಎದುರಿಸುತ್ತಿದ್ದಾರೆ. ಭಕ್ತವತ್ಸಲಂ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ಕ್ರಮಕ್ಕೆ ಒತ್ತಾಯಿಸಿ ಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ. ನ್ಯಾಯಪೀಠವು ವಕೀಲರ ವಾದ ಆಲಿಸಿದ ತನಿಖೆಯ ಪ್ರಗತಿ ಏನಾಗಿದೆ ಎಂಬುದರ ಕುರಿತು ಜೂ.21ಕ್ಕೆ ವರದಿ ಸಲ್ಲಿಸಿಸಲು ಸೂಚಿಸಿದೆ.







