ರಾಜ್ಯದ ಜನರ ಸಮಸ್ಯೆಗಳ ಪರಿಹಾರಕ್ಕೆ ದಿಲ್ಲಿಯಲ್ಲಿ ಪ್ರತ್ಯೇಕ ಕಚೇರಿ: ಡಿ.ವಿ.ಸದಾನಂದಗೌಡ

ಬೆಂಗಳೂರು, ಜೂ. 3: ಕೇಂದ್ರ ಸರಕಾರದ ಮಟ್ಟದಲ್ಲಿ ಕರ್ನಾಟಕ ಮತ್ತು ರಾಜ್ಯದ ಜನರಿಗೆ ಆಗಬೇಕಾಗಿರುವ ಕೆಲಸ ಕಾರ್ಯಗಳಿಗೆ ನೆರವು ನೀಡಲು ಹೊಸದಿಲ್ಲಿಯಲ್ಲಿ ರಾಜ್ಯ ಪ್ರತಿನಿಧಿಸುತ್ತಿರುವ ಎಲ್ಲ ಕೇಂದ್ರ ಸಚಿವರು ಸೇರಿ ಒಂದು ಪ್ರತ್ಯೇಕ ಕಚೇರಿ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಸೋಮವಾರ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕಾರಣವಿಲ್ಲ. ರಾಜ್ಯದ ಹಿತಾಸಕ್ತಿ ಕಾಯಲು ರಾಜ್ಯದ ಎಲ್ಲಾ ನಾಲ್ವರು ಕೇಂದ್ರ ಸಚಿವರು ತೀರ್ಮಾನಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ದಿಲ್ಲಿಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲೇ ರಾಜ್ಯದಿಂದ ಬರುವ ಜನರಿಗೆ ನೆರವು ಒದಗಿಸಲು ಪ್ರತ್ಯೇಕ ಕಾರ್ಯಾಲಯಗಳನ್ನು ಆರಂಭಿಸುವ ತೀರ್ಮಾನ ಮಾಡಿದ್ದೇವೆ. ಇನ್ನು 15 ದಿನಗಳ ಒಳಗೆ ಈ ಕಚೇರಿ ಕಾರ್ಯಾರಂಭ ಮಾಡಲಿದೆ ಎಂದು ಅವರು ತಿಳಿಸಿದರು.
ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರದ ನಾಲ್ವರು ಸಚಿವರು ಪ್ರತಿ ತಿಂಗಳು ಸಭೆ ಸೇರಿ, ಚರ್ಚೆ ನಡೆಸಲು ತೀರ್ಮಾನಿಸಿದ್ದೇವೆ. ರಾಜ್ಯದ ಹಿತಾಸಕ್ತಿ ಕಾಯುವ ವಿಚಾರದಲ್ಲಿ ಯಾವುದೇ ರಾಜಿ ಆಗುವುದಿಲ್ಲ ಎಂದು ಅವರು ಇದೆ ವೇಳೆ ತಿಳಿಸಿದರು.
ರಾಜ್ಯದ 28 ಕ್ಷೇತ್ರಗಳ ಪೈಕಿ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ರಾಜ್ಯದ ಜನ ಬಹಳ ನಿರೀಕ್ಷೆ ಇಟ್ಟುಕೊಂಡು ಕೇಂದ್ರದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರ ನಿರೀಕ್ಷೆಗೆ ಚ್ಯುತಿಬಾರದ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತೇವೆ ಎಂದರು.
ಕೇಂದ್ರ ಸಚಿವ ಸಂಪುಟ ರಚನೆಯಾದ ಮೇಲೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಪ್ರಥಮ ಸಚಿವ ಸಂಪುಟ ಸಭೆಯಲ್ಲೇ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಬಿಜೆಪಿ ಸರಕಾರದ ಹೆಜ್ಜೆ ಯಾವ ರೀತಿ ಇರುತ್ತದೆ ಎಂಬುದಕ್ಕೆ ಸಂಪುಟದ ತೀರ್ಮಾನಗಳು ದಿಕ್ಸೂಚಿಯಾಗಿದೆ ಎಂದರು.
‘ಪ್ರಧಾನಿ ಮೋದಿ ನೇತೃತ್ವದ ಸರಕಾರ ಮುಂದಿನ ದಿನಗಳಲ್ಲಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿಸಿ ಅಭಿವೃದ್ಧಿದತ್ತ ದೇಶವನ್ನು ಕೊಂಡೊಯ್ಯುವುದು ನಿಶ್ಚಿತ. ದೇಶ ಪ್ರೇಮದ ಜೊತೆಗೆ ಪಾರದರ್ಶಕ ಆಡಳಿತ ನೀಡುವ ಗುರಿ ಕೇಂದ್ರ ಸರಕಾರದ್ದು’
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ







