ಮಣಿಪಾಲದ ಮಾಹೆಯಲ್ಲಿ ಸಿದ್ಧಿ ಜನಾಂಗದ ಕ್ರೀಡಾಪ್ರತಿಭೆಗಳಿಗೆ ವೈಜ್ಞಾನಿಕ ತರಬೇತಿ

ಉಡುಪಿ, ಜೂ. 3: ಆಫ್ರಿಕ ಖಂಡದಿಂದ ವಲಸೆ ಬಂದವರೆಂದು ಹೇಳಲಾದ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು, ಹಳಿಯಾಳ, ಅಂಕೋಲ ತಾಲೂಕುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಸಿದ್ಧಿ ಜನಾಂಗದ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಸೂಕ್ತ ತರಬೇತಿಯೊಂದಿಗೆ ಹೊರ ಜಗತ್ತಿಗೆ ಜಗಜ್ಜಾಹೀರು ಗೊಳಿಸಲು ಬೆಂಗಳೂರು ಮೂಲದ ಸರಕಾರೇತರ ಸಂಸ್ಥೆಯೊಂದು ಹಲವು ಯೋಜನೆಗಳೊಂದಿಗೆ ಕಾರ್ಯ ಪ್ರವೃತ್ತವಾಗಿದ್ದು, ಈ ನಿಟ್ಟಿನಲ್ಲಿ ಮುಂಡಗೋಡಿ ನಲ್ಲಿ ತರಬೇತಿ ಪಡೆಯುತ್ತಿರುವ ಆಯ್ದ 18 ಮಂದಿ ಕ್ರೀಡಾಪಟುಗಳು ಇದೀಗ ಮಣಿಪಾಲದಲ್ಲಿ ವೈಜ್ಞಾನಿಕ ರೀತಿಯ ವಿಶೇಷ ತರಬೇತಿ ಪಡೆದಿದ್ದಾರೆ.
ಮಧ್ಯಪ್ರದೇಶ ಹಾಗೂ ಬಿಹಾರಗಳಲ್ಲೂ ಬುಡಕಟ್ಟು ಜನಾಂಗದ ಎಳೆಯ ಪ್ರತಿಭೆಗಳಿಗೆ ಕ್ರೀಡಾತರಬೇತಿ ನೀಡಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಪ್ರೋತ್ಸಾಹ ನೀಡುತ್ತಿರುವ ಬೆಂಗಳೂರು ಮೂಲದ ಎನ್‌ಜಿಒ ‘ಬಿಡ್ಜಸ್ ಆಫ್ ಸ್ಪೋರ್ಟ್ಸ್’ ಸಂಸ್ಥೆ ಉತ್ತರ ಕನ್ನಡದ ಮುಂಡಗೋಡಿನಲ್ಲಿ ಸಿದ್ಧಿ ಜನಾಂಗದ ಮಕ್ಕಳನ್ನೇ ಕೇಂದ್ರೀಕರಿಸಿಕೊಂಡು ಇತರ ಹಿಂದುಳಿದ ಲಂಬಾಣಿ, ಗೌಳಿ ಜನಾಂಗದ ಪ್ರತಿಭಾನ್ವಿತ ಮಕ್ಕಳನ್ನು ಆಯ್ಕೆ ಮಾಡಿ ತರಬೇತಿ ನೀಡುತಿದ್ದು, ಅವರಿಗೆ ವಿಶೇಷ ತರಬೇತಿ ನೀಡಲು ಮಣಿಪಾಲದ ಮಾಹೆ ಸಂಸ್ಥೆಯ ಸಹಕಾರದೊಂದಿಗೆ ಇಲ್ಲಿನ ವಿವಿಧ ಕ್ರೀಡಾ ಸೌಲಭ್ಯಗಳನ್ನು ಬಳಸಿಕೊಂಡು 15 ದಿನಗಳ ವೈಜ್ಞಾನಿಕ ತರಬೇತಿಯನ್ನು ನೀಡಿದೆ.
ದಶಕದ ಹಿಂದೆ ಸಿದ್ಧಿ ಜನಾಂಗ ಮಕ್ಕಳಲ್ಲಿರುವ ಕ್ರೀಡಾಪ್ರತಿಭೆಯನ್ನು ಬಳಸಿಕೊಳ್ಳಲು ಕೇಂದ್ರ ಕ್ರೀಡಾ ಇಲಾಖೆ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿತ್ತು. ಈ ಜನಾಂಗದ ಮಕ್ಕಳ ಕ್ರೀಡಾಪ್ರತಿಭೆಯನ್ನು ಗುರುತಿಸಿ ಅವರಿಗೆ ಸಾಯ್ ಸೇರಿದಂತೆ ವಿವಿಧ ತರಬೇತಿ ಕೇಂದ್ರಗಳಲ್ಲಿ ವಿಶೇಷ ತರಬೇತಿ ನೀಡುವುದು ಈ ಯೋಜನೆಯ ಭಾಗವಾಗಿತ್ತು. ಆದರೆ ಸಿದ್ಧಿ ಮಕ್ಕಳ ಪ್ರತಿಭೆ, ಸಾಮರ್ಥ್ಯವನ್ನು ಸರಿಯಾಗಿ ಗ್ರಹಿಸುವಲ್ಲಿ ವಿಫಲರಾದ ನಮ್ಮ ಕ್ರೀಡಾ ಅಧಿಕಾರಿಗಳಿಂದಾಗಿ ಇಡೀ ಯೋಜೆ ವಿಫಲಗೊಂಡಿತ್ತು.
ಇದೀಗ ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಸಂಸ್ಥೆ ಇಂಥ ಬುಡಕಟ್ಟು ಜನಾಂಗ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅವಕಾಶ ನೀಡಲು ಮುಂದಾಗಿದ್ದು, ಕಳೆದ ಮೂರು ವರ್ಷಗಳಿಂದ ಮುಂಡಗೋಡಿನಲ್ಲಿ ಸುಮಾರು 150 ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ಶಾಲಾ ಶಿಕ್ಷಣದೊಂದಿಗೆ, ಅಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ಶಿಕ್ಷಣವನ್ನೂ ನೀಡುತ್ತಿದೆ.
ಉತ್ತರ ಕನ್ನಡದ ತಾಲೂಕು ಕೇಂದ್ರದಲ್ಲಿರುವ ಕ್ರೀಡಾಸೌಲಭ್ಯ ಸೀಮಿತವಾಗಿದ್ದು, ಈ ಮಕ್ಕಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀ/ಯ ಮಟ್ಟದಲ್ಲಿ ಬೆಳಗಲು ಬೇಕಾದ ಅವಕಾಶಕ್ಕಾಗಿ ವೈಜ್ಞಾನಿಕ ರೀತಿಯ ತರಬೇತಿಯ ಅಗತ್ಯ ಮನಗಂಡಿರುವ ಸಂಸ್ಥೆಯ ತರಬೇತುದಾರ ರಿಜ್ವಾನ್ ಬೆಂಡಿಗೇರಿ ಇದಕ್ಕಾಗಿ ಮಾಹೆಯೊಂದಿಗೆ ಮಾತನಾಡಿ ಆಯ್ದ 18 ಮಂದಿ ಮಕ್ಕಳಿಗೆ ಇಲ್ಲಿನ ಸ್ಪೋರ್ಟ್ಸ್ ಸಾಯನ್ಸ್ ವಿಭಾಗದ ನೇತೃತ್ವದಲ್ಲಿ ಇವರಿಗೆ 15 ದಿನಗಳ ‘ಅತ್ಯುನ್ನತ ಪ್ರದರ್ಶನ ಶಿಬಿರ’ಕ್ಕೆ ವ್ಯವಸ್ಥೆ ಮಾಡಿದರು.
ಶಿಬಿರಕ್ಕೆ ಆಯ್ಕೆಗೂ ಮಾನದಂಡವನ್ನು ಬಳಸಿದ ರಿಜ್ವಾನ್, ಪ್ರತಿ ಸ್ಪರ್ಧೆಯ ರಾಜ್ಯ ದಾಖಲೆಯ ಶೇ.20ರಷ್ಟು ಹೆಚ್ಚಿನ ಪ್ರದರ್ಶನ ತೋರಿದವ ರನ್ನೇ ಆಯ್ಕೆ ಮಾಡಿದರು. ಹೀಗೆ ಆಯ್ಕೆ ಮಾಡಲಾದ ಮಕ್ಕಳ ವಯೋಮಿತಿ 8ರಿಂದ 17 ವರ್ಷದೊಳಗಿತ್ತು. ಇವರಲ್ಲಿ ಅಧಿಕ ಮಂದಿ ಅಂದರೆ 12 ಮಂದಿ ಸಿದ್ಧಿ ಬಾಲಕ-ಬಾಲಕಿಯರು. ಉಳಿದವರು ಲಂಬಾಣಿ ಮತ್ತು ಗೌಳಿ ಜನಾಂಗದವರು. ತರಬೇತಿ ಪಡೆದವರಲ್ಲಿ ಬಾಲಕಿಯರು ಅಧಿಕ ಸಂಖ್ಯೆಯಲ್ಲಿದ್ದರು.
ಸಂಸ್ಥೆ ಇವರಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ. ಅಲ್ಲದೇ ಇವರೆಲ್ಲರೂ ಮುಂಡಗೋಡಿನ ಲೊಯೋಲಾ ಶಾಲೆಯಲ್ಲಿ ಶಿಕ್ಷಣವನ್ನು ಪಡೆಯುತಿದ್ದಾರೆ. ವಿವಿಧ ತರಗತಿಗಳಲ್ಲಿ ಕಲಿಯುತ್ತಿರುವ ಇವರು ಬಿಡುವಿನ ವೇಳೆಯಲ್ಲಿ ರಿಜ್ವಾನ್ ಮಾರ್ಗದರ್ಶನದಲ್ಲಿ ಕ್ರೀಡಾ ತರಬೇತಿಯನ್ನು ಪಡೆಯುತ್ತಾರೆ. ಇದೀಗ ಕಳೆದ 15 ದಿನಗಳ ಕಾಲ ಮಣಿಪಾಲದಲ್ಲಿ ಪಡೆದ ತರಬೇತಿಯಿಂದ ಇವರ ಆತ್ಮವಿಶ್ವಾಸ ಹೆಚ್ಚಿದೆ.
ಸಾಮಾನ್ಯವಾಗಿ ಸಿದ್ಧಿಗಳು ಆಫ್ರಿಕನ್‌ರಂತೆ ದೂರ ಓಟದಲ್ಲಿ (ಲಾಂಗ್ ಡಿಸ್ಟೆನ್ಸ್ ರನ್) ಪರಿಣಿತರೆಂದು ಅಂದಾಜಿಸಲಾಗಿತ್ತು. ಅದರಂತೆ ಕ್ರೀಡಾ ಪ್ರಾಧಿಕಾರ ಹಿಂದೆ ಅವರಿಗೆ ದೂರ ಓಟದಲ್ಲೇ ತರಬೇತಿಯನ್ನು ನೀಡಿತ್ತು. ಆದರೆ ಅು ನಿರೀಕ್ಷಿತ ಯಶಸ್ಸು ಪಡೆದಿರಲಿಲ್ಲ. ಆದರೆ ಮಣಿಪಾಲದ ಸೆಂಟರ್ ಫಾರ್ ಸ್ಪೋರ್ಟ್ಸ್ ಸಾಯನ್ಸ್, ಮೆಡಿಸಿಲ್ ಮತ್ತು ಸಂಶೋಧನೆಯ ಡಾ.ಪಿ.ಡೇವಿಸ್ ಅವರು ಪ್ರತಿಯೊಬ್ಬ ತರಬೇತುದಾರರನ್ನು ವೈಜ್ಞಾನಿಕ ರೀತಿಯ ಪರೀಕ್ಷೆಗೊಳಪಡಿಸಿ, ಅವರ ಕ್ರೀಡಾ ಸಾಮರ್ಥ್ಯವನ್ನು ಅಂದಾಜಿಸಿದ್ದು, ಅದರಂತೆ ಆಯಾ ಸ್ಪರ್ಧೆಗಳಲ್ಲೇ ತರಬೇತಿ ಪಡೆಯುವಂತೆ ಸೂಚಿಸಿದ್ದಾರೆ.
ಹೀಗಾಗಿ ಇಲ್ಲಿ ತರಬೇತಿ ಪಡೆದ ಹೆಚ್ಚಿನ ಕ್ರೀಡಾಪಟುಗಳು 100 ಮತ್ತು 200 ಮೀ. ಓಟದಲ್ಲೇ ತರಬೇತಿ ಪಡೆದಿದ್ದಾರೆ. ಕೆಲವು 200 ಮತ್ತು 400ಮೀ.ನಲ್ಲಿ ಮತ್ತೆ ಕೆಲವರು 800ಮೀ. ಮತ್ತು 1500ಮೀ.ನಲ್ಲಿ ತರಬೇತಿ ಪಡೆದಿದ್ದಾರೆ ಮುಂದೆ ಪಡೆಯಲಿದ್ದಾರೆ. ಒಂದಿಬ್ಬರಿಗೆ ಮಾತ್ರ 5000ಮೀ. ಓಟದಲ್ಲಿ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ಇವರ ಪ್ರದರ್ಶನ ಉತ್ತಮ ಗೊಳ್ಳುತಿದ್ದು, ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ಮೂಡುತ್ತಿದೆ ಎಂದು ರಿಝ್ವಾನ್ ನುಡಿದರು.
ಸಮಾರೋಪ: 15 ದಿನಗಳ ಈ ತರಬೇತಿಯ ಸಮಾರೋಪ ಸಮಾರಂಭ ಇಂದು ಸಂಜೆ ಮಣಿಪಾಲದ ಮೆರೆನಾ ಕ್ರೀಡಾ ಸಂಕೀರ್ಣದಲ್ಲಿ ನಡೆಯಿತು. ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಕ್ರೀಡಾ ಕಾರ್ಯದರ್ಶಿ ಡಾ. ವಿನೋದ ನಾಯಕ್, ಜಂಟಿ ಕಾರ್ಯದರ್ಶಿ ಡಾ.ಶೋಭಾ ಈರಪ್ಪ ಮುಂತಾದವರು ಮಕ್ಕಳಿಗೆ ಶುಭವನ್ನು ಹಾರೈಸಿ 2024ರ ಒಲಿಂಪಿಕ್ಸ್‌ನಲ್ಲಿ ಒಂದಿಬ್ಬರಾದರೂ ಭಾರತವನ್ನು ಪ್ರತಿನಿಧಿಸಿ ಸ್ಪರ್ಧಿಸಲು ಅವಕಾಶ ಪಡೆಯಲಿ ಎಂದು ಆಶಿಸಿದರು.







