ಸರ್ಕಾರದಿಂದ ಕನ್ನಡ ಶಾಲೆ ಉಳಿಸುವ ಪ್ರಯತ್ನವಾಗಲಿ-ಪುನರೂರು
ಪುತ್ತೂರು: ಪುಸ್ತಕ ಮೇಳ, ಸಾಹಿತ್ಯ ಉತ್ಸವ ಸಮಾರೋಪ

ಪುತ್ತೂರು: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯುವ ಹಾಗೂ ಕನ್ನಡ ಶಾಲೆಗಳನ್ನು ಮುಚ್ಚುವುದರಲ್ಲಿ ಪ್ರಸ್ತುತ ಸರ್ಕಾರವು ಆಸಕ್ತಿ ತೋರಿಸುತ್ತಿದೆ. ಸರಕಾರಕ್ಕೆ ನೈಜ ಕಾಳಜಿಯಿದ್ದಲ್ಲಿ ಕನ್ನಡ ಶಾಲೆಗಳನ್ನು ಉಳಿಸುವಲ್ಲಿ ಪ್ರಯತ್ನಿಸ ನಡೆಸಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನೂರು ಹೇಳಿದರು.
ಅವರು ಸೋಮವಾರ ಕಳೆದ ಮೂರು ದಿನಗಳಿಂದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಂಟಿ ಆಶ್ರಯದಲ್ಲಿ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಪುಸ್ತಕ ಮೇಳ, ಸಾಹಿತ್ಯ ಉತ್ಸವ, ಮಕ್ಕಳಿಗೆ ಅಭಿನಂದನೆ ಹಾಗೂ ಕೃತಿಗಳ ಬಿಡುಗಡೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ನಾಡು ಕರ್ನಾಟಕದಲ್ಲೇ ಇಂತಹಾ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟಕರ ವಿಷಯವಾಗಿದೆ. ಕನ್ನಡಿಗರಿಗೆ ತಮ್ಮನ್ನು ಕನ್ನಡಿಗರು ಎಂದು ಹೇಳಿಕೊಳ್ಳುವುದಕ್ಕೇ ನಾಚಿಕೆ ಪಡುವ ಪರಿಸ್ಥಿತಿ ಉಂಟಾಗಿದೆ. ಹೀಗಾದರೆ ಕನ್ನಡ ಭಾಷೆಯನ್ನು ಉಳಿಸುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಈ ವಿಷಯದಲ್ಲಿ ಸರಕಾರಕ್ಕೆ ಇಚ್ಚಾಶಕ್ತಿ ಬೇಕು ಎಂದು ಹೇಳಿದರು.
ಸಮಾರೋಪ ಭಾಷಣ ಮಾಡಿದ ಪುತ್ತೂರು ಸರಕಾರಿ ಪ್ರಥಮದರ್ಜೆ ಕಾಲೇಜು ಸಹಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಅವರು ಪ್ರಸ್ತುತ ವಿಚಾರಗಳು ಮತ್ತು ಮಾತು ಅಂತರ್ಮುಖಿಯಾಗಿ ಚಲಿಸುತ್ತಿದೆ. ಸಂಬಂಧಗಳು ಸಹವಾಸದ ನೆಲೆಯಲ್ಲಿ ಅಂಟಿಕೊಂಡಿಲ್ಲ. ಇದಕ್ಕೆಲ್ಲಾ ಮುಖ ಇಲ್ಲದ ನವ ಮೌಖಿಕತೆ ಮೇಳೈಸುತ್ತಿರುವುದೇ ಕಾರಣ ಎಂದ ಅವರು, ಸಾಹಿತ್ಯ, ಕನ್ನಡ ಭಾಷೆಯನ್ನು ಉಳಿಸಬೇಕಾದರೆ ಪುಸ್ತಕಕ್ಕೆ, ಸಾಹಿತ್ಯಕ್ಕೆ ಕಿವಿಗೊಡಬೇಕು. ಆಗ ಬದುಕುವುದು ಹೇಗೆ ಎಂಬುದು ಗೊತ್ತಾಗುತ್ತದೆ ಎಂದರು.
ದ.ಕ.ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಸಂಸ್ಕಾರ, ವಿದ್ಯೆ ಮನುಷ್ಯನನ್ನು ರೂಪಿಸುತ್ತದೆ. ಆದರೆ ಶಿಕ್ಷಣ ನೀತಿ ಸರಕಾರಕ್ಕೆ ಇಲ್ಲದಿರುವುದು ಒಂದೇ ದುರಂತ. ಎಲ್ಲಿಯ ತನಕ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ದೊರೆವುದಿಲ್ಲವೋ ಅಲ್ಲಿ ತನಕ ಸಾಹಿತ್ಯ ಬೆಳೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜಾಗೃತಿಯ ಚಿಂತನೆಗಳು ಸಾಹಿತ್ಯದಿಂದ ಆಗಬೇಕು, ಯುವ ಜನತೆಗೆ ಪ್ರೇರಣೆ ನೀಡುವ ಪ್ರಕ್ರಿಯೆ ಆಗಬೇಕು. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷಾ ವ್ಯವಸ್ಥೆ ಆಗಬೇಕು ಎಂದ ಅವರು, ದ.ಕ.ಜಿಲ್ಲೆಯಲ್ಲಿ ಜೀವನ ಮೌಲ್ಯಗಳನ್ನು ಕೊಡುವ ಸಾಹಿತ್ಯಕ್ಕೆ ಒತ್ತು ನೀಡಲಾಗುತ್ತಿದ್ದು, ಈ ಮೂಲಕ ಸಾಹಿತ್ಯ ಚಿಂತನೆಗೆ ಹೊಸರೂಪ ಕೊಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಜಾಗೃತಿ ನಾಯಕ್, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಸ್ವಸ್ತಿಕ್ ಪಿ, 8ನೇ ಸ್ಥಾನ ಪಡೆದ ಸಾತ್ವಿಕಾ ಪಿ. ಹಾಗೂ 9ನೇ ಸ್ಥಾನ ಪಡೆದ ಫಾತಿಮತ್ ಸಾಹಿದಾ ಅವರನ್ನು ಗೌರವಿಸಲಾಯಿತು. ಎಸ್‍ಎಸ್‍ಎಲ್‍ಸಿಯಲ್ಲಿ ಕನ್ನಡದಲ್ಲಿ 125 ಅಂಕ ಪಡೆದ ಅಮೃತಾ ಎಸ್.ವಿ. ಅವರನ್ನು ಗೌರವಿಸಲಾಯಿತು.
ಉದ್ಯಮಿಗಳಾದ ಬಲರಾಮ ಆಚಾರ್ಯ, ಮುಳಿಯ ಶ್ಯಾಮ್ ಭಟ್ ಉಪಸ್ಥಿತರಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಜ್ಯೋತಿ ರಾವ್ ಎಚ್. ಸ್ವಾಗತಿಸಿದರು. ನಿವೃತ್ತ ಅಧ್ಯಾಪಿಕೆ ಪ್ರೊ.ವತ್ಸಲಾರಾಜ್ಞಿ ವಂದಿಸಿದರು. ವಿದ್ಯಾರ್ಥಿನಿ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.







