ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಸಚಿವ ಖಾದರ್

ಉಳ್ಳಾಲ: ತೊಕ್ಕೊಟ್ಟು ಮೇಲ್ಸೇತುವೆಯಿಂದ ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಸ್ಥಳೀಯ ಮಟ್ಟದ ಜನರ ಸಮಸ್ಯೆ ಪರಿಹರಿಸದೆ ಮೇಲ್ಸೇತುವೆ ಉದ್ಘಾಟನೆ ಮಾಡಿದರೆ ಪ್ರಯೋಜನವಿಲ್ಲ. ಕಾಮಗಾರಿ ಅವೈಜ್ಞಾನಿಕವಾಗಿದೆ. ಜನರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಶೀಘ್ರ ಸಮಸ್ಯೆ ಪರಿಹರಿಸುವ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಸಂಸದರು, ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಸೋಮವಾರ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅಬರು ಮಾತನಾಡಿದರು.
ಸ್ಥಳೀಯರನ್ನು ಕಷ್ಟಕ್ಕೆ ಸಿಲುಕಿಸಿ ಗೋವಾ ಮತ್ತು ಕೇರಳಕ್ಕೆ ನೇರವಾಗಿ ಹೋಗಲು ಅವಕಾಶ ನೀಡಿದರೆ ಯಾವುದೇ ಪ್ರಯೋಜನವಿಲ್ಲ, ಮೇಲ್ಸೇತುವೆಯಿಂದ ಸ್ಥಳೀಯರಿಗೂ ಪ್ರಯೋಜನವಾಗುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಸಮಸ್ಯೆಗೆ ಪರಿಹಾರವಿದ್ದು, ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ಎಂಟು ವರ್ಷಗಳ ಹಿಂದೆ ಕಾಮಗಾರಿ ಆರಂಭ ಸಂದರ್ಭದಲ್ಲೇ ಅವೈಜ್ಞಾನಿಕವಾಗಿದ್ದರಿಂದ ನಾನು ತಡದಿದ್ದೆ. ನೇರವಾಗಿ ಮೇಲ್ಸೇತುವೆ ಮಾಡುವಂತೆ ಸೂಚಿಸಿದ್ದರೂ ಜನರು ನನ್ನನ್ನೇ ದೂಷಿಸಿದರು. ಅಂದು ಜನಪ್ರಿನಿಧಿಗಳು, ಜನರು ಬೆಂಬಲ ನೀಡಿದ್ದರೆ ಮೇಲ್ಸೇತುವೆ ವಿಸ್ತರಣೆಯಾಗುತ್ತಿತ್ತು. ಅಂದು ನನ್ನನ್ನು ದೂಷಿಸಿ ರಾಜಕೀಯ ಮಾಡಿದ್ದರಿಂದ ಈಗ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ನಗರಸಭಾ ಇಂಜಿನಿಯರ್ ದಿವಾಕರ್, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.








