ಪುತ್ರನನ್ನು ನೇಣಿಗೆ ಹಾಕಿ ಕೊಲೆಗೈದ ಪ್ರಕರಣ: ಐವರನ್ನು ಬಂಧಿಸಿದ ಎಚ್‌ಎಎಲ್ ಪೊಲೀಸರು

ಬೆಂಗಳೂರು, ಜೂ.3: ವ್ಯಕ್ತಿಯೋರ್ವ ತನ್ನ ಪುತ್ರನನ್ನು ನೇಣುಹಾಕಿ ಕೊಲೆಗೈದು, ಪತ್ನಿಯ ಆತ್ಮಹತ್ಯೆಗೂ ಕಾರಣವಾಗಿದ್ದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಇಲ್ಲಿನ ಎಚ್‌ಎಎಲ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಭೂತಿಪುರದ ಸುಧಾ, ಮಂಜು, ಡೈಸಿ ಪ್ರಭಾವತಿ ಹಾಗೂ ರಾಮ್ ಬಹದ್ದೂರ್ ಬಂಧಿತ ಆರೋಪಿಗಳು ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಪ್ರಕರಣದ ವಿವರ?: ಆರೋಪಿಗಳ ಕಿರುಕುಳದಿಂದ ಸುರೇಶ್ ಬಾಬು ಹಾಗೂ ಅವರ ಪತ್ನಿ ಗೀತಾಬಾಯಿ, ಇಬ್ಬರು ಮಕ್ಕಳ ಜೊತೆ ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದ್ದರು. ಅದರಂತೆ ಜೂ.1 ರಂದು ಮಧ್ಯರಾತ್ರಿ 1 ಗಂಟೆಗೆ ಸುರೇಶ್‌ಬಾಬು 12 ವರ್ಷದ ತನ್ನ ಪುತ್ರ ವರುಣ್ ರಾವ್‌ನನ್ನು ನೇಣುಬಿಗಿದು ಕೊಲೆ ಮಾಡಿ, ನಂತರ ಪತ್ನಿಯ ಜೊತೆ ನೇಣು ಹಾಕಿಕೊಳ್ಳಲು ನಿರ್ಧರಿಸಿದ್ದ.
ಈ ದೃಶ್ಯವನ್ನು ಚಿತ್ರೀಕರಿಸುವಂತೆ ಮಗಳಿಗೆ ಹೇಳಿದ್ದ. ಅದರಂತೆ ತಮ್ಮ ನೇಣು ಹಾಕಿಕೊಂಡಿರುವ ವಿಡಿಯೋ ಮಾಡಿದ್ದಳು. ಬಳಿಕ ತಮ್ಮನ ದೃಶ್ಯ ನೋಡಿ ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಕೂಗಾಡಿದ್ದಾಳೆ. ಅಷ್ಟೊತ್ತಿಗಾಗಲೇ ತಾಯಿ ಗೀತಾಬಾಯಿ ನೇಣು ಹಾಕಿಕೊಂಡಿದ್ದರು. ಆಗ ಗಲಾಟೆ ಮಾಡುತ್ತಿದ್ದ ಮಗಳನ್ನು ಕರೆದುಕೊಂಡು ಹೊರಗೆ ಬಂದ ಸುರೇಶ್‌ಬಾಬು ಕೊಠಡಿಯ ಬಾಗಿಲು ಹಾಕಿ ಕೂಗಾಡಿ ಸ್ಥಳೀಯರಿಗೆ ಪತ್ನಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೆ ಕೊಟ್ಟಿದ್ದ ಎನ್ನಲಾಗಿದೆ.
ಈ ಪ್ರಕರಣ ಸಂಬಂಧ ತನಿಖೆ ಕೈಗೊಂಡು ಸುರೇಶ್‌ಬಾಬು ದಂಪತಿ ಬಳಿ ಚೀಟಿ ವ್ಯವಹಾರದಲ್ಲಿ ಕಿರುಕುಳ ನೀಡಿದ್ದ 5 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನಿಬ್ಬರ ಹೆಸರು ಕೇಳಿಬಂದಿದ್ದು, ಅವರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಬ್ದುಲ್ ಅಹದ್ ತಿಳಿಸಿದ್ದಾರೆ.







