ಮೂಡಾ ನೂತನ ಅಧ್ಯಕ್ಷ ರತ್ನಾಕರ ಸಿ.ಮೊಯಿಲಿ ಅಧಿಕಾರ ಸ್ವೀಕಾರ

ಮೂಡುಬಿದಿರೆ: ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರ(ಮೂಡ)ದ ನಾಲ್ಕನೇ ಅಧ್ಯಕ್ಷರಾಗಿ ಮಾಜಿ ಪುರಸಭಾ ಸದಸ್ಯ ರತ್ನಾಕರ ಸಿ. ಮೊಯಿಲಿ ಅವರು ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು.
ನಂತರ ನಡೆದ ಸರಳ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ರತ್ನಾಕರ ಮೊಯಿಲಿ `ಯೋಜನಾ ಪ್ರಾಧಿಕಾರದ ನಿಯಮಗಳಿಂದ ಭೂಪರಿವರ್ತನೆಗೆ, ಮನೆ ನಿರ್ಮಾಣಕ್ಕೆ ಸ್ವಲ್ಪ ಅನಾನುಕೂಲವಾಗುತ್ತಿದ್ದು ಮೂಡುಬಿದಿರೆಗೆ ಈ ನಿಯಮವನ್ನು ಸರಳೀಕೃತಗೊಳಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು' ಎಂದರು. ಮೂಡ ಅಧ್ಯಕ್ಷರಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದಾಗಿ ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿ` ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿರುವಾಗ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರೆ ಜನ ನೆನಪಿಟ್ಟುಕೊಳ್ಳುತ್ತಾರೆ. ರತ್ನಾಕರ ಮೊಯಿಲಿ ಈ ಹಿಂದೆ ಪುರಸಭೆ ಉಪಾಧ್ಯಕ್ಷರಾಗುವ ಅವಕಾಶ ಇದ್ದರೂ ಅದನ್ನು ಇನ್ನೊಬ್ಬರಿಗೆ ಬಿಟ್ಟುಕೊಟ್ಟಿದ್ದರು. ಭವಿಷ್ಯದಲ್ಲಿ ಅವರಿಗೆ ಜನಸೇವೆ ಮಾಡುವ ಅಧಿಕಾರವನ್ನು ನೀಡಬೇಕೆಂದು ಪಕ್ಷ ಆವತ್ತೆ ಯೋಚಿಸಿದ್ದು, ಅದನ್ನು ಈಗ ಕಾರ್ಯಕತಗೊಳಿಸಿದೆ' ಎಂದರು.
ಮೂಡ ಸದಸ್ಯ ಪಿ.ಕೆ ಥೋಮಸ್ ಮಾತನಾಡಿ ಮುಂದಿನ ಐವತ್ತು ವರ್ಷಗಳವರೆಗೆ ಮೂಡುಬಿದಿರೆಯ ಅಭಿವೃದ್ಧಿ ಹೇಗಿರಬೇಕೆಂಬ ಕಲ್ಪನೆಯನ್ನಿಟ್ಟುಕೊಂಡು ವಿವಿಧ ಸಂಘ ಸಂಸ್ಥೆಗಳು ಸಹಕಾರದೊಂದಿಗೆ ಪುರಸಭೆ ಆಡಳಿತ ಯೋಜನೆಯನ್ನು ರೂಪಿಸಲು ಚಿಂತಿಸಲಾಗುವುದು ಎಂದು ಹೇಳಿದರು.
ಮೂಡ ಸದಸ್ಯ ಸುರೇಶ್ ಕೋಟ್ಯಾನ್, ನಿಯೋಜಿತ ನಾಮನಿರ್ದೇಶಿತ ಸದಸ್ಯ ತೋಡಾರು ದಿವಾಕರ ಶೆಟ್ಟಿ, ಮೂಡ ಮಾಜಿ ಅಧ್ಯಕ್ಷ ಸುರೇಶ್ ಪ್ರಭು, ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರನ್ನು ಮೂಡುಬಿದಿರೆ ನಗರ ಯೋಜನಾ ಪಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ರೂಪಾ ಸಿ.ಕೆ ಅಭಿನಂದಿಸಿದರು. ನಗರ ಯೋಜಕರಾದ ಉಬಯದುಲ್ಲಾ ಉಪಸ್ಥಿತರಿದ್ದರು.







