ಸ್ಥಳೀಯ ಸಂಸ್ಥೆ ಚುನಾವಣೆ: ಯಡಿಯೂರಪ್ಪ ಸ್ವಕ್ಷೇತ್ರದಲ್ಲಿಯೇ ಬಿಜೆಪಿಗೆ ಮುಖಭಂಗ
ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ ಪ.ಪಂ,ನಲ್ಲಿ ಮೈತ್ರಿಕೂಟಕ್ಕೆ ಅಧಿಕಾರದ ಗದ್ದುಗೆ

ಶಿವಮೊಗ್ಗ, ಜೂ. 3: ಬಿಜೆಪಿ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದ, ಆ ಪಕ್ಷದ ರಾಜ್ಯಾಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರೂರು ಶಿಕಾರಿಪುರ ಪಟ್ಟಣದ ಪುರಸಭೆ ಹಾಗೂ ಶಿರಾಳಕೊಪ್ಪ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಧೂಳೀಪಟವಾಗಿದೆ. ಭಾರೀ ಮುಖಭಂಗಕ್ಕೀಡಾಗಿದೆ. ಸರಿಸುಮಾರು ಕಳೆದೆರೆಡು ದಶಕಗಳಿಂದಿದ್ದ ಹಿಡಿತ ಕೈ ತಪ್ಪಿ ಹೋಗಿದೆ.
ಈ ಎರಡೂ ಕಡೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಕ್ಷ ಆಡಳಿತ ನಡೆಸಿಕೊಂಡು ಬರುತ್ತಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡೂ ಕಡೆ ಅಧಿಕಾರದ ಗದ್ದುಗೆ ಕಳೆದುಕೊಂಡಿರುವುದು ಬಿಜೆಪಿ ಪಾಳಯಕ್ಕೆ ಅಕ್ಷರಶಃ ಶಾಕ್‍ಗೊಳಗಾದ ಅನುಭವ ಉಂಟು ಮಾಡಿದೆ. ಸ್ಥಳೀಯ ಕಮಲ ನಾಯಕರು, ಕಾರ್ಯಕರ್ತರು ತೀವ್ರ ನಿರಾಸೆಗೊಳಗಾಗುವಂತಾಗಿದೆ.
ಇನ್ನೊಂದೆಡೆ ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ವ್ಯಕ್ತವಾಗಿರುವ ಅನಿರೀಕ್ಷಿತ ಬೆಂಬಲವು ಎರಡೂ ಪಕ್ಷಗಳಲ್ಲಿ ಸಂಚಲನ ಸೃಷ್ಟಿಸಿದೆ. ಸ್ಥಳೀಯ ನಾಯಕರು, ಕಾರ್ಯಕರ್ತರ ಸಂತಸಕ್ಕೆ ಪಾರವೇ ಇಲ್ಲದಂತೆ ಮಾಡಿದೆ. ಚುನಾವಣೆ ನಡೆದಿದ್ದು ಪಟ್ಟಣದಲ್ಲಾಗಿದ್ದರೂ, ತಾಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ಎರಡೂ ಕಡೆಯ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ ಸಂಭ್ರಮ ವ್ಯಕ್ತಪಡಿಸಿದ ವರದಿಗಳು ಬಂದಿವೆ.
ಹಿನ್ನಡೆಗೆ ಕಾರಣವೇನು?: ಇತ್ತೀಚೆಗೆ ಲೋಕಸಭೆ ಚುನಾವಣಾ ಫಲಿತಾಂಶವು ಬಿಜೆಪಿ ಪಕ್ಷದ ಆತ್ಮವಿಶ್ವಾಸ ಇಮ್ಮಡಿಸಿತ್ತು. ಈ ಕಾರಣದಿಂದ ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಲ್ಲಿ ನಿರಾಯಾಸವಾಗಿ ಅಧಿಕಾರದ ಗದ್ದುಗೆಯೇರುವ ಅತೀಯಾದ ಆತ್ಮವಿಶ್ವಾಸದಲ್ಲಿ ಆ ಪಕ್ಷವಿತ್ತು. ಅದರಲ್ಲಿಯೂ ಬಿಜೆಪಿ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದ ಶಿಕಾರಿಪುರ ಪುರಸಭೆ ಹಾಗೂ ಶಿರಾಳಕೊಪ್ಪ ಪಟ್ಟಣ ಪಂಚಾಯತ್ ಗಳಲ್ಲಿ ಅನಾಯಾಸವಾಗಿ ಆಡಳಿತದ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರ ಆ ಪಕ್ಷದ ನಾಯಕರದ್ದಾಗಿತ್ತು.
ಆದರೆ ಬಿಜೆಪಿಯ ಈ ಎಲ್ಲ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ. ಭದ್ರಕೋಟೆಯೇ ಕೈ ಬಿಟ್ಟು ಹೋಗಿದೆ. ಕೆಲ ವಾರ್ಡ್‍ಗಳಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಕಣದಿಂದ ದೂರ ಸರಿಸುವಲ್ಲಿ ವಿಫಲವಾಗಿದ್ದು, ವಾರ್ಡ್ ಸದಸ್ಯರ ಬಗ್ಗೆಯಿದ್ದ ಅಸಮಾಧಾನ, ಆಡಳಿತ ವಿರೋಧಿ ಅಲೆ, ವ್ಯವಸ್ಥಿತವಾಗಿ ಚುನಾವಣೆ ನಡೆಸುವಲ್ಲಿ ನಾಯಕರು ವಿಫಲವಾಗಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ನಾಯಕರ ಒಗ್ಗಟ್ಟು ಬಿಜೆಪಿ ಹಿನ್ನಡೆಗೆ ಪ್ರಮುಖ ಕಾರಣಗಳಾಗಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಇಳಿಕೆ: ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಮತಗಳಿಕೆಗೆ ಗಮನಿಸಿದರೆ, ಬಿಜೆಪಿಗೆ ಶಿಕಾರಿಪುರ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಲೀಡ್ ಲಭ್ಯವಾಗುತ್ತಿಲ್ಲ. ಬಿ.ಎಸ್.ಯಡಿಯೂರಪ್ಪ ಸ್ವಕ್ಷೇತ್ರದಲ್ಲಿಯೇ ಬಿಜೆಪಿ ಓಟ್ ಬ್ಯಾಂಕ್ ಕರಗುತ್ತಿದೆ. ಈ ನಡುವೆ ಶಿಕಾರಿಪುರ ಪುರಸಭೆ ಹಾಗೂ ಶಿರಾಳಕೊಪ್ಪ ಪಟ್ಟಣ ಪಂಚಾಯತ್ ಆಡಳಿತ ಕೈ ತಪ್ಪಿ ಹೋಗಿರುವುದು ಆ ಪಕ್ಷದ ನಾಯಕರನ್ನು ಚಿಂತೆಗೀಡು ಮಾಡಿದೆ.







