ಬಲವಂತದ ಹಿಂದಿ ಹೇರಿಕೆಗೆ ಮುಂದಾದರೆ ತಮಿಳುನಾಡು ಮಾದರಿಯ ಹೋರಾಟ: ಸಿದ್ದರಾಮಯ್ಯ

ಮೈಸೂರು,ಜೂ.3: ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಮೂಲಕ ಕೇಂದ್ರ ಸರ್ಕಾರ ಏಕಮುಖಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತ್ರಿಭಾಷಾ ಶಿಕ್ಷಣ ನೀತಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಲ್ಲ, ನಾವೇನಾದರೂ ಹಿಂದಿ ಭಾಷೆ ಬೇಕು ಎಂದು ಕೇಳಿದ್ದೇವೆಯೇ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಇದಕ್ಕೆ ಪಾಲಿಸಿ ತರುತ್ತಿರುವುದು ನಮ್ಮ ಮೇಲೆ ಬಲವಂತದ ಹೇರಿಕೆಯಾಗಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾದರೆ ನಾವು ತಮಿಳುನಾಡು ಮಾದರಿಯ ಹೋರಾಟ ಮಾಡಲು ಸಿದ್ದ ಎಂದು ಹೇಳಿದರು.
ಇವಿಎಂಗಳ ಬಗ್ಗೆ ಮತ್ತೊಮ್ಮೆ ಸಂಶಯ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸ್ಥಳೀಯ ಸಂಸ್ಥೇಗಳ ಚುನಾವಣಾ ಫಲಿತಾಂಶ ಇವಿಎಂ ಮೇಲಿನ ಅನುಮಾನವನ್ನು ಪುಷ್ಟೀಕರಿಸಿದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲೆಲ್ಲಿ ಬಿಜೆಪಿಗೆ ಲೀಡ್ ಬಂದಿತ್ತೋ ಅಲ್ಲೆಲ್ಲ ಕಾಂಗ್ರೆಸ್‍ಗೆ ಲೀಡ್ ಬಂದಿದೆ. ಬಿಜೆಪಿಯವರು ಇವಿಎಂ ಮ್ಯಾನುಪ್ಲೇಟ್ ಮಾಡುತ್ತಾರೆ ಎನ್ನುವ ಅನುಮಾನ ಮತ್ತಷ್ಟು ಸ್ಪಷ್ಟವಾಗಿದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಸಂಪುಟ ವಿಸ್ತರಣೆಯನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದರು.







