ಸಿದ್ದರಾಮಯ್ಯರಿಗೆ ವಿವಿ ಪ್ಯಾಟ್ ಬಗ್ಗೆ ಅನುಮಾನವಿದ್ದರೆ ನ್ಯಾಯಾಲಯಕ್ಕೆ ಹೋಗಲಿ: ಸಿಟಿ ರವಿ

ಚಿಕ್ಕಮಗಳೂರು, ಜೂ.3: ವಿವಿಪ್ಯಾಟ್ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ಬಳಸಿದ ವಿವಿಪ್ಯಾಟ್‍ನ್ನು ಮರುಪರಿಶೀಲನೆಗೆ ಒಳಪಡಿಸಿ ಆ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಎಂದು ಶಾಸಕ ಸಿ.ಟಿ ರವಿ ಸವಾಲೆಸೆದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವಿಎಂ ಯಂತ್ರಕ್ಕೆ ಆನ್‍ಲೈನ್‍ನ ಸಂಪರ್ಕವಿರುವುದಿಲ್ಲ. ಆನ್‍ಲೈನ್‍ನ ಸಂಪರ್ಕದಲ್ಲಿದ್ದರೆ ಹ್ಯಾಕ್ ಮಾಡುವ ಸಂಭವವಿರುತ್ತದೆ. ಆದರೆ ಆಧುನಿಕ ತಾಂತ್ರಿಕತೆಯಿಂದ ಕೂಡಿರುವ ಇವಿಎಂ ಯಂತ್ರವನ್ನು ಹ್ಯಾಕ್ ಮಾಡಲು ಅವಕಾಶವಿರುವುದಿಲ್ಲ ಎಂಬುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿದು ಮಾತನಾಡಬೇಕೆಂದರು.
ಸಿದ್ದರಾಮಯ್ಯ ಅವರಿಗೆ ಒರಟುತನವಿದೆ, ಅದನ್ನು ಜನ ನಾಯಕತ್ವದ ಗುಣ ಎಂದು ಒಪ್ಪಿಕೊಂಡಿದ್ದಾರೆ, ಆದರೆ ಅವರ ದಡ್ಡತನವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಟೀಕಿಸಿದ ಸಿಟಿ ರವಿ, ಸೋಲು ಗೆಲುವುಗಳನ್ನು ನಮ್ಮ ಪಕ್ಷ ಜನಾಭಿಪ್ರಾಯ ಎಂದು ಒಪ್ಪಿಕೊಂಡಿದೆ. ಆದರೆ ಜನತೆ ನೀಡಿದ ಜನಾಭಿಪ್ರಾಯವನ್ನು ಒಪ್ಪಿಕೊಳ್ಳದ ಮನೋಸ್ಥಿತಿಯವರು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಆರೋಪದ ಹಿಂದೆ ಜನಾಭಿಪ್ರಾಯವನ್ನು ತಿರುಚುವ ಹುನ್ನಾರ ಅಡಗಿದೆ ಎಂದರು.
ಇವಿಎಂ ಬಳಕೆಗೆ ಬಂದಿದ್ದು 2004ರ ಚುನಾವಣೆಯಲ್ಲಿ ತದನಂತರ 10 ವರ್ಷಗಳ ಕಾಲ ಗೆಲುವು ಸಾಧಿಸಿ ಕಾಂಗ್ರೆಸ್ ಆಡಳಿತ ನಡೆಸಿತ್ತು. ಇದು ಇವಿಎಂನ ದೋಷವೇ ಎಂದು ಪ್ರಶ್ನಿಸಿದ ಅವರು ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಡದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇಲ್ಲಿ ಇವಿಎಂನ ದುರುಪಯೋಗ ನಡೆದಿದೆಯೇ ಎಂದ ಅವರು, ಕೇರಳದಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 20 ಸಂಸದೀಯ ಕ್ಷೇತ್ರಗಳ ಪೈಕಿ 18ರಲ್ಲಿ ಯುಡಿಎಫ್ ಗೆಲುವು ಸಾಧಿಸಿದೆ. ಇವಿಎಂ ತಿರುಚಿದ್ದರೆ ಕೇರಳದಲ್ಲಿ ಬಿಜೆಪಿ ಗೆಲ್ಲುತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಆರೋಪ ಮಾಡುವವರಿಗೆ ಇಷ್ಟು ತಿಳಿದಿಲ್ಲವೇ ಎಂದು ತಿರುಗೇಟು ನೀಡಿದರು.







