ಉಪವಾಸದಿಂದ ಭಯಭಕ್ತಿ: ಅನ್ವರ್ ಆಲಿ
ಕಾಪು ಪ್ರೆಸ್‍ಕ್ಲಬ್‍ನಲ್ಲಿ ಸೌಹಾರ್ದ ಇಫ್ತಾರ್ ಕೂಟ
ಕಾಪು: ದೇವರ ಭಯ-ಭಕ್ತಿ-ಒಲವು ಮೂಡುವಂತೆ ಮಾಡುವ ಗಟ್ಟಿತನ ಉಪವಾಸ ಹೊಂದಿದೆ ಎಂದು ಜಮಾತೆ ಇಸ್ಲಾಮಿ ಹಿಂದ್‍ನ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಹೇಳಿದರು.
ಅವರು ಸೋಮವಾರ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜರಗಿದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಧರ್ಮಸಂದೇಶವನ್ನು ನೀಡಿದರು.
ಉಪವಾಸದಿಂದ ಜೀವನವನ್ನು ಸಂಸ್ಕರಿಸಿದಂತಾಗುತ್ತದೆ. ಹಾಗಾಗಿ ಎಲ್ಲಾ ಧರ್ಮಗಳಲ್ಲಿಯೂ ಉಪವಾಸ ವ್ರತಕ್ಕೆ ವಿಶೇಷ ಆದ್ಯತೆ ಇರುತ್ತದೆ. ಅರಿಷಡ್ವರ್ಗಗಳನ್ನು ದೂರೀಕರಿಸುವ ಶಕ್ತಿ ಉಪವಾಸ ವ್ರತಕ್ಕೆ ಇದೆ. ಯಾರಿಗೆ ತನ್ನ ಹಸಿವಿನ ಜೊತೆ ಮತ್ತೋರ್ವನ ಹಸಿವಿನ ಬಗ್ಗೆ ಅರಿವು ಕಾಳಜಿ ಮೂಡತ್ತದೆಯೋ ಅದಾಗ ನೈತಿಕವಾಗಿ ಆತ ಬದಲಾವಣೆಯನ್ನು ಹೊಂದುತ್ತಾನೆ. ಹಸಿವು ಜ್ಞಾನಕ್ಕೆ ಸಹಕಾರಿಯಾಗಿದೆ.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಮೋದ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಯಾಝ್ ಇಸ್ಮಾಯಿಲ್ ಪಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ಅಧ್ಯಕ್ಷ ಪ್ರಮೋದ್ ಸುವರ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಾದಿರಾಜ ರಾವ್ ನಡಿಮನೆ ವಂದಿಸಿದರು. ಪತ್ರಕರ್ತಅಬ್ದುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.





