ಇಂದಿರಾ ಗಾಂಧಿ ಪ್ರತಿಮೆಯನ್ನು ಬುರ್ಖಾದಿಂದ ಮುಚ್ಚಿದ ದುಷ್ಕರ್ಮಿಗಳು

ಲಕ್ನೋ, ಜೂ.3: ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪ್ರತಿಮೆಯನ್ನು ದುಷ್ಕರ್ಮಿಗಳು ಬುರ್ಖಾದಿಂದ ಮುಚ್ಚಿರುವುದನ್ನು ವಿರೋಧಿಸಿ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಜಿಲ್ಲೆಯ ಹಿರಿಯ ಅಧಿಕಾರಿಗಳು ಪ್ರತಿಮೆಯಿಂದ ಬುರ್ಖಾವನ್ನು ತೆರವುಗೊಳಿಸಿದರು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಮಾಧ್ಯಮ ವರದಿಗಳ ಪ್ರಕಾರ, ಇಂದಿರಾ ಗಾಂಧಿ ಪ್ರತಿಮೆಯನ್ನು ಬುರ್ಖಾದಿಂದ ಮುಚ್ಚಿರುವುದನ್ನು ಸೋಮವಾರ ಮುಂಜಾನೆ ದಾರಿಹೋಕರು ಗಮನಿಸಿ ಇತರರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಈ ಕೃತ್ಯದ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ, ಕೆಲವು ದುಷ್ಕರ್ಮಿಗಳು ಇಲ್ಲಿ ವಾತಾವರಣವನ್ನು ಹಾಳು ಮಾಡಲು ಬಯಸುತ್ತಿದ್ದಾರೆ. ಆದರೆ ನಾವು ಅವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.





