ತಪ್ಪಿದ ಅನಾಹುತ: ಲಂಡನ್ ಮಸೀದಿಗೆ ನುಗ್ಗಿದ ಶಸ್ತ್ರಸಜ್ಜಿತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಮುಸ್ಲಿಮರು

ಲಂಡನ್: ಇಲ್ಲಿನ ಮಸೀದಿಯೊಂದರಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬನನ್ನು ಪ್ರಾರ್ಥನೆಗೆ ಬಂದಿದ್ದ ಮುಸ್ಲಿಮರು ಹಿಮ್ಮೆಟ್ಟಿಸಿದ ಘಟನೆಯ ಸಿಸಿಟಿವಿ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಶ್ಚಿಮ ಲಂಡನ್‌ನ ಸೌತ್‌ಹಾಲ್ ಪ್ರದೇಶದ ಹಯೇಸ್ ರಸ್ತೆಯಲ್ಲಿರುವ ದಾರುಸ್ಸಲಾಂ ಸಾಂಸ್ಕೃತಿಕ ಕೇಂದ್ರಕ್ಕೆ ನುಗ್ಗಿದ ಶಸ್ತ್ರಸಜ್ಜಿತ ದಾಳಿಕೋರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮುಂಜಾನೆ 4.30ರ ವೇಳೆಗೆ ನಡೆದಿದೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ.
ವೀಡಿಯೊದಲ್ಲಿ ಕಂಡುಬರುವಂತೆ ಕಬ್ಬಿಣದ ಸುಟ್ಟಿಗೆಯೊಂದನ್ನು ಬೀಸುತ್ತಾ ದಾಳಿಕೋರ ಮಸೀದಿ ಆವರಣ ಪ್ರವೇಶಿಸುವ ಹಂತದಲ್ಲೇ ಜಾಗೃತ ನಾಗರೀಕರು ಹಿಂದಿನಿಂದ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ತಕ್ಷಣ ಇತರರೂ ಥಟ್ಟನೇ ಆತನ ಮೇಲೆರಗಿದರು.
"ಹಿಂದಿನ ದಿನ ಮಸೀದಿಗೆ ಪ್ರಾರ್ಥನೆಗೆ ಆಗಮಿಸಿದ್ದ ಕೆಲ ವ್ಯಕ್ತಿಗಳ ಜತೆ ಈ ದಾಳಿಕೋರ ಸಂಘರ್ಷಕ್ಕೆ ಇಳಿದಿದ್ದ ಎನ್ನಲಾಗಿದೆ. ಪೊಲೀಸರು ಆಗಮಿಸುವ ಮುನ್ನವೇ ಭಕ್ತರು ಆತನನ್ನು ವಶಕ್ಕೆ ಪಡೆದಿದ್ದರು" ಎಂದು ಮೆಟ್ರೊಪಾಲಿಟನ್ ಪೊಲೀಸ್ ವಕ್ತಾರ ಹೇಳಿಕೆಯನ್ನು ಉಲ್ಲೇಖಿಸಿ ಲಂಡನ್‌ನ ಸ್ಕೈನ್ಯೂಸ್ ವರದಿ ಮಾಡಿದೆ.
ಭೀಕರ ದಾಳಿ ಮಾಡುವ ಪ್ರಯತ್ನದಲ್ಲಿದ್ದ ಎಂಬ ಶಂಕೆಯ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದು, ಪಶ್ಚಿಮ ಲಂಡನ್ ಠಾಣೆಯಲ್ಲಿ ಕಸ್ಟಡಿಯಲ್ಲಿಡಲಾಗಿದೆ ಎಂದು ವರದಿ ಹೇಳಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಕ್ರೈಸ್ಟ್‌ಚರ್ಚ್ ಮಸೀದಿಯ ಮೇಲೆ ದಾಳಿ ಮಾಡಿದ ಆಸ್ಟ್ರೇಲಿಯಾದ ಬ್ರೆಂಡನ್ ಟೆರಂಟ್ ಎಂಬಾತ ಪ್ರಾರ್ಥನೆಗೆ ಬಂದಿದ್ದ 49 ಮಂದಿಯನ್ನು ಹತ್ಯೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.







