ಮುಂಗಾರುಪೂರ್ವ ಮಳೆಯಲ್ಲಿ ಶೇ.25 ಕೊರತೆ

ಹೊಸದಿಲ್ಲಿ, ಜೂ.4: ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಿಗೆ ಕೊನೆಗೊಂಡ ಮುಂಗಾರುಪೂರ್ವ ಮಳೆಯಲ್ಲಿ ಶೇ.25 ಕೊರತೆಯಾಗಿದ್ದು, ಈ ಅವಧಿಯಲ್ಲಿ ಬಿದ್ದ ಮಳೆ ಪ್ರಮಾಣ ಕಳೆದ 65 ವರ್ಷಗಳಲ್ಲೇ ಎರಡನೇ ಅತೀ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ನ ಅಂಕಿಅಂಶಗಳು ತಿಳಿಸಿವೆ.
ಮಾರ್ಚ್ 1ರಿಂದ ಮೇ 31ರವರೆಗೆ ದೇಶಾದ್ಯಂತ ಕೇವಲ 99ಮಿ.ಮೀ ಮಳೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹವಾಮಾನ ಇಲಾಖೆ ವರದಿಯ ಪ್ರಕಾರ, ಮಳೆ ಪ್ರಮಾಣ ಕಳೆದ 65 ವರ್ಷಗಳಲ್ಲಿ ಕೇವಲ ಮೂರು ಬಾರಿ ಮೂರಂಕೆಗಿಂತ ಕಡಿಮೆಯಾಗಿದೆ. 2012ರಲ್ಲಿ 90.5ಮಿ.ಮೀ ಮಳೆಯಾಗಿದ್ದು ಅತ್ಯಂತ ಕಡಿಮೆ, 2009ರಲ್ಲಿ 99ಮಿ.ಮೀ ಮಳೆಯಾಗಿತ್ತು ಮತ್ತು 1954ರಲ್ಲಿ 93.9ಮಿ.ಮೀ ಮಳೆಯಾಗಿತ್ತು, ಈ ವರ್ಷದ ಮುಂಗರುಪೂರ್ವ ಮಳೆ ಪ್ರಮಾಣ ಕಳೆದ 65 ವರ್ಷಗಳಲ್ಲಿ ಎರಡನೇ ಅತೀ ಕಡಿಮೆಯಾಗಿದೆ. 2012ರಲ್ಲಿ ಶೇ.31 ಮಳೆ ಕೊರತೆ ಉಂಟಾಗಿರುವುದು ಈವರೆಗಿನ ಅತೀಕಡಿಮೆ ಪ್ರಮಾಣವಾಗಿದೆ ಎಂದು ಸ್ಕೈಮೆಟ್ ತಿಳಿಸಿದೆ.
ಮಳೆ ಕೊರತೆಗೆ ಸ್ಕೈಮೆಟ್ ಎಲ್‌ನಿನೊವನ್ನು ದೂಷಿಸಿದೆ. ಪೆಸಿಫಿಕ್ ನಲ್ಲಿ ನೀರು ಬಿಸಿಯಾಗುವ ಮೂಲಕ ಎಲ್ ನಿನೊ ಪರಿಣಾಮ ಉಂಟಾಗುತ್ತದೆ. ಎಲ್ ನಿನೊ ದುರ್ಬಲವಾಗಿರಲಿ ಅಥವಾ ಪ್ರಬಲವಾಗಿರಲಿ ಅದು ಮುಂಗಾರಿನ ಮೇಲೆ ಪ್ರಭಾವ ಬೀರಲು ಸಾಕಾಗುತ್ತದೆ ಎಂದು ಸ್ಕೈಮೆಟ್ ತಿಳಿಸಿದೆ. ದೇಶದ ಶೇ.52 ಭಾಗ ಅಸಾಮಾನ್ಯವಾಗಿ ಒಣಗಿದ್ದು ಇದು 2018ಕ್ಕಿಂತ ಶೇ.6 ಹೆಚ್ಚಾಗಿದೆ. ಕೆಲವು ಪ್ರದೇಶಗಳು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ಬರಗಾಲ ಎಚ್ಚರಿಕೆ ವ್ಯವಸ್ಥೆ ತಿಳಿಸಿದೆ.







