ಮಣಿಪಾಲ ವಿವಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಮಣಿಪಾಲ, ಜೂ.4: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ತನ್ನ ಕ್ಯಾಂಪಸ್‌ನಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿತು.
ಈ ಸಂಬಂಧ ಏರ್ಪಡಿಸಲಾದ ಪರಿಸರ ಜಾಗೃತಿ ಜಾಥಾಕ್ಕೆ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ವಿವಿ ಕಟ್ಟಡದ ಬಳಿ ಹಸಿರು ನಿಶಾನೆ ತೋರಿಸಿದರು. ಜಾಥಾ ದಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಹಾಗೂ ಡಾ. ಟಿಎಂಎ ಪೈ ಫೌಂಡೇಶನ್‌ನ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರೊಂದಿಗೆ ಮಣಿಪಾಲದ ಕಾಲೇಜ್ ಆಫ್ ನರ್ಸಿಂಗ್‌ನ ಆವರಣದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವೂ ನಡೆಯಿತು.
ಕೊನೆಯಲ್ಲಿ ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಪರಿಸರ, ಪರಿಸರ ಜಾಗೃತಿ ಹಾಗೂ ಪರಿಸರ ರಕ್ಷಣೆಯ ಕುರಿತಂತೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಲಾಯಿತು.
ಉಡುಪಿ ಕುಂಜಿಬೆಟ್ಟಿನ ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸಂಜನಾ ಅವರು ಮಾತನಾಡಿ, ‘ಇಂದು ನಾವು ಸೇವಿಸುವ ಗಾಳಿ, ಕುಡಿಯುವ ನೀರು ಹಾಗೂ ಬೆಳೆಯುವ ಮಣ್ಣು ಹಲವು ವಿಧದ ಮಾಲಿನ್ಯಗಳಿಂದ ಬಾಧಿತವಾಗಿವೆ. ನಮಗೆ ಜೀವನಾವಶ್ಯಕವಾದ ಎಲ್ಲಾ ವಸ್ತುಗಳನ್ನು ಮಾಲಿನ್ಯಗೊಳಿಸುವುದಕ್ಕೆ ನಾವೇ ಸಂಪೂರ್ಣ ಹೊಣೆಗಾರ ರಾಗಿದ್ದೇವೆ.’ ಎಂದವರು ನುಡಿದರು.
‘ಮನುಷ್ಯ ಈ ಭೂಮಿ ಮತ್ತು ಅದರಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳನ್ನು ತನ್ನ ದುರಾಶೆಯ ಅಗತ್ಯತೆಗಾಗಿ ಶೋಷಿಸುತಿದ್ದಾನೆ. ಹೀಗಾಗಿ ನಾವಿಂದು ಜಾಗತಿಕ ತಾಪಮಾನ, ಮಳೆಯ ತೀವ್ರ ಕೊರತೆ ಹಾಗೂ ವಾತಾವರಣದ ವೈಫರಿತ್ಯಗಳ ದುಷ್ಪರಿಣಾಮಗಳನ್ನು ಅನುಭವಿಸು ವಂತಾಗಿದೆ. ಇವು ನಮ್ಮ ಬದುಕನ್ನು ಅಸಹನೀಯಗೊಳಿಸಿದೆ’ ಎಂದು ಹೇಳಿದ ಸಂಜನಾ, ಪರಿಸರದ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವಂತೆ ಮನವಿ ಮಾಡಿದರು.
ಡಾ.ಎಚ್.ಎಸ್.ಬಲ್ಲಾಳ್, ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ. ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು.ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಅತಿಥಿಗಳನ್ನು ಸ್ವಾಗತಿಸಿದರೆ, ಮಣಿಪಾಲ ಕೆಎಂಸಿ ಡೀನ್ ಡಾ.ಪ್ರಜ್ಞಾರಾವ್ ಪರಿಸರ ದಿನದ ಸಂದೇಶವನ್ನು ನೀಡಿದರು. ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ.ಗೀತಾ ಎಂ ವಂದಿಸಿದರು.








