75 ವರ್ಷಗಳ ಬಳಿಕ ಭಾರತದ ಯೋಧರ ಪಾರ್ಥಿವ ಅವಶೇಷಗಳು ತಾಯ್ನಾಡಿಗೆ!

ಹಿಸ್ಸಾರ್(ಹರ್ಯಾಣ),ಜೂ.4: ದ್ವಿತೀಯ ಮಹಾಯುದ್ಧದಲ್ಲಿ ಜರ್ಮನ್ ಪಡೆಗಳ ವಿರುದ್ಧ ಹೋರಾಡುತ್ತ ಬಲಿದಾನಗೈದಿದ್ದ ಬ್ರಿಟಿಷ್ ಭಾರತೀಯ ಸೇನೆಯ ಇಬ್ಬರು ಯೋಧರ ಅವಶೇಷಗಳನ್ನು ಅವರು ಸಾವನ್ನಪ್ಪಿದ ಸುಮಾರು 75 ವರ್ಷಗಳ ಬಳಿಕ ಸೋಮವಾರ ಇಟಲಿಯಿಂದ ಹಿಸ್ಸಾರ್ ಮತ್ತು ಝಜ್ಜರ್ ಜಿಲ್ಲೆಗಳ ಅವರ ಸ್ವಗ್ರಾಮಗಳಿಗೆ ತಂದು ಬಂಧುಗಳಿಗೆ ಹಸ್ತಾಂತರಿಸಲಾಗಿದೆ.
ಯೋಧರಾದ ಪಾಲು ರಾಮ್ ಮತ್ತು ಹರಿ ಸಿಂಗ್ ಅವರು ಬ್ರಿಟಿಷ್ ಭಾರತೀಯ ಸೇನೆಯ 13ನೇ ಫ್ರಾಂಟಿಯರ್ ಫೋರ್ಸ್ ರೈಫಲ್ಸ್‌ನ 4ನೇ ಬಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪಾಲು ರಾಮ್ ತನ್ನ 19ನೇ ವಯಸ್ಸಿನಲ್ಲಿ 1944ರಲ್ಲಿ ಇಟಲಿಯ ಪಾಗ್ಗಿಯೊ ಅಲ್ಟೋದಲ್ಲಿ ಜರ್ಮನ್ ಪಡೆಗಳ ವಿರುದ್ಧ ಹೋರಾಡುತ್ತ ಪ್ರಾಣ ತೆತ್ತಿದ್ದರು ಎಂದು ಜಿಲ್ಲಾ ಸೈನಿಕ್ ಬೋರ್ಡ್‌ನ ಕ್ಯಾ.(ನಿವೃತ್ತ) ಪ್ರದೀಪ ಬಾಲಿ ತಿಳಿಸಿದರು. ಹರಿ ಸಿಂಗ್ ಯುದ್ಧದಲ್ಲಿ ಹೋರಾಡುವಾಗ ಅವರಿಗೆ 18 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.
ಯುದ್ಧದಲ್ಲಿ ಮೃತಪಟ್ಟವರ ಪಾರ್ಥಿವ ಅವಶೇಷಗಳು 1960ರ ದಶಕದಲ್ಲಿ ಇಟಲಿಯಲ್ಲಿ ಪತ್ತೆಯಾದ ಬಳಿಕ ಅವುಗಳನ್ನು ಗುರುತು ಹಚ್ಚುವ ಪ್ರಕ್ರಿಯೆ 2010ರವರೆಗೂ ಮುಂದುವರಿದಿತ್ತು. ಆರು ವರ್ಷಗಳ ಹಿಂದೆ ಇವರಿಬ್ಬರೂ ಐರೋಪ್ಯೇತರ ಯೋಧರೆನ್ನುವುದು ಡಿಎನ್‌ಎ ಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಭಾರತೀಯ ಸೇನೆ ಮತ್ತು ಸಂಬಂಧಿತ ಇತರ ಪ್ರಾಧಿಕಾರಗಳ ನೆರವಿನಿಂದ ರಾಮ್ ಮತ್ತು ಸಿಂಗ್ ಕುಟುಂಬಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿತ್ತು.







