ನಾಪತ್ತೆಯಾಗಿರುವ ವಾಯುಪಡೆ ವಿಮಾನದ ಎಸ್‌ಒಎಸ್ ಸಂಕೇತ ಸಾಧನ 14 ವರ್ಷ ಹಳೆಯದು!

ಹೊಸದಿಲ್ಲಿ,ಜೂ.4: ಸೋಮವಾರದಿಂದ ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ ಎಎನ್-32 ವಿಮಾನದಲ್ಲಿ ಅಳವಡಿಸಲಾಗಿರುವ ಶೋಧ ಮತ್ತು ರಕ್ಷಣಾ ಸಂಕೇತ ದೀಪದ ತಯಾರಿಕೆ 14 ವರ್ಷಗಳ ಹಿಂದೆಯೇ ಸ್ಥಗಿತಗೊಂಡಿದೆ. ವಿಮಾನದಲ್ಲಿರುವ ಸಾಧನವು ಈಗಲೂ ಕಾರ್ಯಾಚರಿಸುತ್ತಿರಬಹುದಾದರೂ ವಿಮಾನದ ಅವಶೇಷಗಳಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿರುವ ತಂಡಗಳಿಗೆ ಅದರಿಂದ ಯಾವುದೇ ಸಂಕೇತವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಎಂಟು ಸಿಬ್ಬಂದಿ ಮತ್ತು ಐವರು ಪ್ರಯಾಣಿಕರನ್ನು ಹೊತ್ತು ಅಸ್ಸಾಮಿನ ಜೋರ್ಹಾಟ್‌ನಿಂದ ಅರುಣಾಚಲ ಪ್ರದೇಶದ ಮೆಚುಕಾಕ್ಕೆ ಹಾರಾಟ ಆರಂಭಿಸಿದ್ದ ಈ ವಿಮಾನವು ಕೇವಲ 35 ನಿಮಿಷಗಳಲ್ಲಿ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು.
ಈ ವಿಮಾನದಲ್ಲಿ ಬ್ರಿಟನ್ನಿನ ಸಿಗ್ನೇಚರ್ ಇಂಡಸ್ಟ್ರೀಸ್ ತಯಾರಿಸಿದ್ದ ‘ಸಾರ್ಬೆ 8’ ಹೆಸರಿನ ಒಂದೇ ಎಮರ್ಜನ್ಸಿ ಲೊಕೇಟರ್ ಟ್ರಾನ್ಸ್‌ಮಿಟರ್‌ನ್ನು ಅಳವಡಿಸಲಾಗಿತ್ತು. ರಷ್ಯ ನಿರ್ಮಿತ ವಿಮಾನದ ಕಾರ್ಗೋ ವಿಭಾಗದಲ್ಲಿ ಅಳವಡಿಸಲಾಗಿದ್ದ ಇದು ವಿಮಾನಕ್ಕೆ 20ಜಿ(ಗುರುತ್ವಾಕರ್ಷಣ ಶಕ್ತಿಯ 20 ಪಟ್ಟು) ಅಥವಾ ಅದಕ್ಕೂ ಹೆಚ್ಚಿನ ಆಘಾತವುಂಟಾದಾಗ ಅಪಾಯದ ಸಂಕೇತವನ್ನು ರವಾನಿಸಬೇಕಿತ್ತು.
ಈ ಸಂಕೇತವನ್ನು ಅಂತರರಾಷ್ಟ್ರೀಯ ಉಪಗ್ರಹ ನೆರವಿನ ಶೋಧ ಮತ್ತು ರಕ್ಷಣಾ ವ್ಯವಸ್ಥೆ ‘ಕಾಸ್ಪಸ್ ಸರ್ಸಟ್’ಗೆ ಸೇರಿದ ಉಪಗ್ರಹವು ಗ್ರಹಿಸಬೇಕಿತ್ತು. ಅಲ್ಲದೆ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ವಿಮಾನವೂ ಈ ಸಂಕೇತ ಶಬ್ದವನ್ನು ಆಲಿಸಬೇಕಿತ್ತು. ಅಪಾಯದಲ್ಲಿರುವ ವಿಮಾನಗಳಿಗಾಗಿಯೇ ಮೀಸಲಾಗಿರುವ 242 ಎಂಎಚ್‌ಝಡ್ ತರಂಗಾಂತರಕ್ಕೆ ಈ ವಿಮಾನದಲ್ಲಿಯ ರೇಡಿಯೊವನ್ನು ಹೊಂದಿಸಲಾಗಿದೆ.
ಸಿಗ್ನೇಚರ್ ಇಂಡಸ್ಟ್ರೀಸ್ 2005ರ ಬಳಿಕ ಸಾರ್ಬೆ 5,6,7 ಮತ್ತು 8ರ ತಯಾರಿಕೆಯನ್ನು ನಿಲ್ಲಿಸಿತ್ತು. ಸಾರ್ಬೆ 8ರ ಬದಲು ಸಾರ್ಬೆ ಜಿ2ಆರ್-ಇಎಲ್‌ಟಿಯನ್ನು ಬಿಡುಗಡೆಗೊಳಿಸಲಾಗಿತ್ತು.
ಎಎನ್-32 ವಿಮಾನದ ಮೊದಲ ಗ್ರಾಹಕನಾಗಿದ್ದ ಭಾರತೀಯ ವಾಯುಪಡೆಯು 1986ರಲ್ಲಿ ಈ ವಿಮಾನಗಳ ಸೇರ್ಪಡೆಯನ್ನು ಆರಂಭಿಸಿತ್ತು. ಅದು ಇಂತಹ 105 ವಿಮಾನಗಳನ್ನು ಹೊಂದಿದೆ ಎನ್ನಲಾಗಿದೆ. 2009ರಲ್ಲಿ ಈ ವಿಮಾನಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಜೀವಿತಾವಧಿಯನ್ನು ಹೆಚ್ಚಿಸಲು ಉಕ್ರೇನ್‌ನೊಂದಿಗೆ 400 ಮಿ.ಡಾ.ಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಹೀಗೆ ಮೇಲ್ದರ್ಜೆಗೇರಿಸಲಾದ ಎಎನ್-32 ಆರ್‌ಇ ವಿಮಾನಗಳ ಪೈಕಿ 46 ವಾಯುಪಡೆಯಲ್ಲಿ ಮರುಸೇರ್ಪಡೆಗೊಂಡಿದ್ದು,ಇವು ಎರಡು ಆಧುನಿಕ ಎಮರ್ಜನ್ಸಿ ಲೊಕೇಟರ್ ಟ್ರಾನ್ಸ್‌ಮಿಟರ್‌ಗಳನ್ನು ಹೊಂದಿವೆ. ಇವು ಈಗ ನಾಪತ್ತೆಯಾಗಿರುವ ವಿಮಾನದಲ್ಲಿಯ ಸಾಧನಕ್ಕಿಂತ ಕನಿಷ್ಠ ಒಂದು ತಲೆಮಾರಿನಷ್ಟು ಮುಂದಿನ ತಂತ್ರಜ್ಞಾನವನ್ನು ಹೊಂದಿವೆ. ಈ ವಿಮಾನವನ್ನು ಇನ್ನೂ ಮೇಲ್ದರ್ಜೆಗೇರಿಸಿರಲಿಲ್ಲ.
ಭಾರತೀಯ ವಾಯುಪಡೆ,ಸೇನೆ ಮತ್ತು ಇಟಿಬಿಪಿ ನಾಪತ್ತೆಯಾಗಿರುವ ವಿಮಾನಕ್ಕಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ ಈವರೆಗೂ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ. ನೌಕಾಪಡೆಯೂ ಶಕ್ತಿಶಾಲಿ ಸಿಂಥೆಟಿಕ್ ಅಪರ್ಚರ್ ರೇಡಾರ್, ಇನ್‌ಫ್ರಾರೆಡ್ ಮತ್ತು ಎಲೆಕ್ಟ್ರೋ ಆಪ್ಟಿಕ್ ಸೆನ್ಸರ್‌ಗಳಿಂದ ಸಜ್ಜಿತವಾಗಿರುವ ತನ್ನ ಅತ್ಯಾಧುನಿಕ ವಿಮಾನವನ್ನೂ ಶೋಧಕಾರ್ಯಕ್ಕೆ ನಿಯೋಜಿಸಿದೆ.







