ಬುಧವಾರ ಕರಾವಳಿಯಲ್ಲಿ ‘ಈದುಲ್ ಫಿತ್ರ್’ ಸಂಭ್ರಮ
ಮಂಗಳೂರು, ಜೂ.4: ಪವಿತ್ರ ರಮಝಾನ್‌ನ 30 ವೃತಗಳನ್ನು ಅನುಷ್ಠಾನಗೊಳಿಸಿದ ಕರಾವಳಿಯ ಮುಸ್ಲಿಮರು ಬುಧವಾರ ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ದ.ಕ. ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಎಲ್ಲಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮದ ಕಳೆ ತರುವ ತವಕದಲ್ಲಿದ್ದಾರೆ.
ಹೊಸ ಬಟ್ಟೆಬರೆ ಧರಿಸಿ, ಬಿರಿಯಾನಿ-ತುಪ್ಪದೂಟ ಸಹಿತ ವಿಶಿಷ್ಟ ಬಗೆಯ ತಿಂಡಿ-ತಿನಿಸು-ಪಾನೀಯವು ಈದ್‌ಗೆ ಹೊಸ ಕಳೆ ತರಲಿದ್ದು, ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಎಲ್ಲರೂ ಹಬ್ಬ ಆಚರಿಸಲು ಸಿದ್ದರಾಗಿದ್ದಾರೆ.
ನಗರದ ಬಾವುಟಗುಡ್ಡದ ಈದ್ಗಾ ಜುಮಾ ಮಸ್ಜಿದ್‌ನಲ್ಲಿ ಬೆಳಗ್ಗೆ ಬೆಳಗ್ಗೆ 8 ಗಂಟೆಗೆ ದ.ಕ. ಜಿಲ್ಲಾ ಖಾಝಿ ಹಾಜಿ ತ್ವಾಕ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಮತ್ತು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಬೆಳಗ್ಗೆ 9 ಗಂಟೆಗೆ ಖತೀಬ್ ಅಬ್ದುಲ್ ಅಝೀಝ್ ಬಾಖವಿಯ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ.





