ಕೂಳೂರು ಸೇತುವೆ ಕಾಮಗಾರಿ ಹಿನ್ನಲೆ: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ವ್ಯವಸ್ಥೆ
ಮಂಗಳೂರು, ಜೂ.4: ರಾ.ಹೆ.66ರ ಕೂಳೂರು-ಪಾಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಮಾನು ಸೇತುವೆಯು ತುಂಬ ಹಳೆಯದಾಗಿದೆ. ಇದು ಶಿಥಿಲಾವಸ್ಥೆಯಲ್ಲಿರುವುದರಿಂದ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮುಗಿಯುವವರೆಗೆ ತಾತ್ಕಾಲಿಕವಾಗಿ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿರುತ್ತಾರೆ.
ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬೆಂಗಳೂರಿನಿಂದ ಎಂಆರ್‌ಪಿಎಲ್-ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳು ಪಡುಬಿದ್ರೆ, ಕಾರ್ಕಳ- ಗುರುವಾಯನಕೆರೆ- ಧರ್ಮಸ್ಥಳ ಕೊಕ್ಕಡ-ಪೆರಿಯಶಾಂತಿ ಮೂಲಕ ಸಂಚರಿಸುವುದು.
ಕೇರಳದಿಂದ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳು ಕೆಪಿಟಿಯಿಂದ ಕಾವೂರು ಬಜ್ಪೆ ಕಾನ ಸುರತ್ಕಲ್ ಮೂಲಕ ಸಂಚರಿಸುವುದು. ಘನ ವಾಹನಗಳಾದ ಲಾರಿ ಬಸ್ಸು ಟ್ಯಾಂಕರ್‌ಗಳಿಗೆ ಕೂಳೂರು ಹೊಸ ಸೇತುವೆಯ ಮೂಲಕ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸುವುದು. ಲಘು ವಾಹನಗಳಾದ ಕಾರು ಜೀಪು, ಟೆಂಪೊ, ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳನ್ನು ಹಳೆಯ ಕಮಾನು ಸೇತುವೆಯ ಮೂಲಕ ದ್ವಿಮುಖವಾಗಿ ಸಂಚರಿಸಲು ಆದೇಶದಲ್ಲಿ ತಿಳಿಸಿದ್ದಾರೆ.





