ಮಂಗಳೂರು: ನಂದಿನಿ ಗ್ರಾಹಕರ ಅರಿವು ಕಾರ್ಯಕ್ರಮ

ಮಂಗಳೂರು, ಜೂ.4: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ 19ನೇ ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ನಗರದ ವಿಶ್ವಾಸ್ ಸಾಮ್ರಾಟ್ ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆ, ಪ್ರಯೋಜನ ಕುರಿತು ಮಾಹಿತಿ ಶಿಬಿರ ನಡೆಸಲಾಯಿತು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ. ಹೆಗ್ಡೆ ಆರೋಗ್ಯ, ಆನಂದಕ್ಕಾಗಿ ಪೋಷಕಾಂಶಭರಿತ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆ ಮಾಡಿ ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಕರೆ ನೀಡಿದರು.
ಮಾರುಕಟ್ಟೆ ವ್ಯವಸ್ಥಾಪಕ ಜಯದೇವಪ್ಪಕೆ. ಮಾತನಾಡಿ ಮಾರುಕಟ್ಟೆಯಲ್ಲಿ ಕಲಬೆರಕೆ ಹಾಲಿನ ಹಾವಳಿ ಹೆಚ್ಚಾಗಿದ್ದು, ಗ್ರಾಹಕರು ಹಾಲನ್ನು ಖರೀದಿಸುವಾಗ, ತಯಾರಕರ ಹೆಸರು, ಸಂಸ್ಥೆಗೆ ಇರುವ ಸಾಮಾಜಿಕ ಬದ್ಧತೆ, ಗುಣಮಟ್ಟ, ದರ ಪರಿಶೀಲಿಸಿ ಖರೀದಿಸಲು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಮ್ಯ ಗಣೇಶ್ ನಂದಿನಿ ಹಾಲಿನ ಬಳಕೆ ಮತ್ತು ಪ್ರಯೋಜನದ ಬಗ್ಗೆ ಹಾಡಿನೊಂದಿಗೆ ಅಧ್ಯಕ್ಷೀಯ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಅಪಾರ್ಟ್‌ಮೆಂಟ್ ನಿವಾಸಿಗಳಾದ ಫೆಲಿಕ್ಸ್ ಡಿಸೋಜ, ಪ್ರವೀಣ್ ಶೆಟ್ಟಿ, ಅಶೋಕ್ ಸುಬ್ಬಯ್ಯ ಭಾಗವಹಿಸಿದ್ದರು.
ಮಾರುಕಟ್ಟೆ ಅಧಿಕಾರಿ ಎಂ.ರವಿ ಸ್ವಾಗತಿಸಿದರು. ಮಾರುಕಟ್ಟೆ ಅಧಿಕಾರಿ ಸಚಿನ್ ಸಿ. ವಂದಿಸಿದರು. ಲೆಕ್ಕಾಧಿಕಾರಿ ಸುಧಾಕರ್ ಕಾರಂತ್, ಆಡಳಿತಾಧಿಕಾರಿ ವಿಮಲಾಕ್ಷಿ, ಮಾರುಕಟ್ಟೆ ಅಧಿಕಾರಿ ಚೇತನ್, ಅಧೀಕ್ಷಕರಾದ ಜಗದೀಶಯ್ಯ, ಗೋಪಾಲಕೃಷ್ಣ ಭಟ್, ಸದಾಶಿವ ನಾಯಕ್, ವಿಜಯಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.







