ಗುರುಪುರ ಗ್ರಾಪಂ: ಸಾಮಾಜಿಕ ಪರಿಶೋಧನಾ ಗ್ರಾಮಸಭೆ

ಮಂಗಳೂರು, ಜೂ.4: ಗುರುಪುರ ಗ್ರಾಪಂನಲ್ಲಿ ಕಾರ್ಯಗತಗೊಂಡ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2019-20ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಮಂಗಳವಾರ ನಡೆಯಿತು.
ಸಭೆಯಲ್ಲಿ ಗುರುಪುರ ಗ್ರಾಪಂ ವ್ಯಾಪ್ತಿಗೊಳಪಟ್ಟ ಮೂಳೂರು ಮತ್ತು ಅಡ್ಡೂರು ಗ್ರಾಮಗಳಲ್ಲಿ ಬಾವಿ, ಮನೆ ಮತ್ತಿತರ ನಿರ್ಮಾಣ ಕಾಮಗಾರಿಗಳಿಗೆ ಯೋಜನೆಯಡಿ ಮಂಜೂರಾದ ಮಜೂರಿ ಮತ್ತು ಸಾಮಗ್ರಿಗಳ ಮೊತ್ತ ಪ್ರಕಟಿಸಲಾಯಿತು.
ಪ್ರಥಮ ಹಂತದಲ್ಲಿ 2 ಗ್ರಾಮಗಳಲ್ಲಿ 53 ಕಾಮಗಾರಿ ಅನುಷ್ಠಾನಗೊಂಡಿದ್ದು, 7,15,189 ರೂ. ವಿನಿಯೋಗಿಸಲಾಗಿದೆ. ಯೋಜನಾ ಸ್ಥಳ ಪರಿಶೀಲನೆ ವೇಳೆ ಎಲ್ಲ ಕಾಮಗಾರಿಗಳ ಗುಣಮಟ್ಟ ಉತ್ತಮವಾಗಿರುವುದು ಕಂಡು ಬಂದಿದೆ ಎಂದು ಯೋಜನೆಗಳ ಕುರಿತು ತಾಲೂಕು ಸಂಯೋಜಕಿ ಧನಲಕ್ಷ್ಮೀ ಮಾಹಿತಿ ನೀಡಿದರು.
ನರೇಗಾ ಯೋಜನೆಯ ಮಜೂರಿ ಬ್ಯಾಂಕ್ ಖಾತೆಗೆ ಬಿದ್ದಿಲ್ಲ ಎಂದು ಫಲಾನುಭವಿಯೊಬ್ಬರು ಸಭೆಯಲ್ಲಿ ದೂರಿಕೊಂಡಾಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕರ್ ದಾಖಲೆಯೊಂದಿಗೆ ಸಭೆಗೆ ಮಾಹಿತಿ ನೀಡಿದರು.
ನರೇಗಾ ಯೋಜನೆಯ ಹೊಸ ನಿಯಮದಂತೆ ಇನ್ನು ಮುಂದೆ ಫಲಾನುಭವಿಗಳಿಗೆ ಸಾಮಗ್ರಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗಬೇಕಿದ್ದರೆ ಪಂಚಾಯತ್ ಕಚೇರಿಗೆ ‘ಜಿಎಸ್‌ಟಿ’ ಬಿಲ್ ಸಲ್ಲಿಸಬೇಕಾಗುತ್ತದೆ. ಸಾಮಗ್ರಿ ಜಿಎಸ್‌ಟಿ ಬಿಲ್ ಪಾವತಿಸದಿದ್ದಲ್ಲಿ ಆ ಮೊತ್ತ ಸಿಗುವುದಿಲ್ಲ. ಈ ನಿಯಮ ನರೇಗಾದ ಎಲ್ಲ ಫಲಾನುಭವಿಗಳಿಗೆ ಅನ್ವಯವಾಗುತ್ತದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾಪಂ ಅಧ್ಯಕ್ಷೆ ರುಕಿಯಾ, ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ತಾಪಂ ಸದಸ್ಯ ಸಚಿನ್ ಅಡಪ, ಗ್ರಾಪಂ ಸದಸ್ಯರಾದ ಸದಾಶಿವ ಶೆಟ್ಟಿ, ರಾಜೇಶ್ ಸುವರ್ಣ, ಮುಹಮ್ಮದ್ ಅಡ್ಡೂರು, ಜಯಲಕ್ಷ್ಮಿ, ಸೇಸಮ್ಮ, ಶೋಭಾ, ಸಂಪಾ, ಗ್ಲಾಡಿಸ್ ಪಾಲ್ಗೊಂಡಿದ್ದರು.
ಪಿಡಿಒ ಅಬೂಬಕ್ಕರ್ ಸ್ವಾಗತಿಸಿದರು. ಪ್ರಥಮ ಹಂತದ ಯೋಜನೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಕಾರ್ಯದರ್ಶಿ ನಿತ್ಯಾನಂದ ವಂದಿಸಿದರು.







