ಅವಧಿಗೆ ಮುನ್ನವೇ ಬಿಬಿಎಂಪಿಯಲ್ಲಿ ಗರಿಗೆದರಿದ ರಾಜಕೀಯ ಲೆಕ್ಕಾಚಾರ !

ಬೆಂಗಳೂರು, ಜೂ.4: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿಯಿದ್ದು, ಪಾಲಿಕೆಯಲ್ಲಿ ಇಂದಿನಿಂದಲೇ ಮುಂದಿನ ಅವಧಿಗೆ ಅಧಿಕಾರ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ರಾಜಕೀಯ ಲೆಕ್ಕಾಚಾರ ಗರಿಗೆದರಿದೆ.
ಕಳೆದ ವಾರದಲ್ಲಿ ನಡೆದ ಬಿಬಿಎಂಪಿ ಉಪಚುನಾವಣೆಯಲ್ಲಿ ಬಿಜೆಪಿ ಒಂದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಒಂದು ಸ್ಥಾನದಲ್ಲಿ ಗೆದ್ದಿವೆ. ಅಲ್ಲದೆ, ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಗೆಲುವು ಸಾಧಿಸಿದ್ದು, ಇದೀಗ ಬಿಜೆಪಿಗೆ ಎರಡು ಸ್ಥಾನಗಳು ಹೆಚ್ಚಿವೆ. ಬಿಜೆಪಿಗೆ ಒಂದಂಕಿ ಹೆಚ್ಚಿದ್ದರೆ, ಮೈತ್ರಿ ಪಕ್ಷಗಳಿಗೆ ಒಂದಂಕಿ ಕುಸಿದಿದೆ. ಹೀಗಾಗಿ, ಪಾಲಿಕೆಯಲ್ಲಿ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ಹಲವು ರೀತಿಯಲ್ಲಿ ಕಸರತ್ತು ನಡೆಸುತ್ತಿದೆ.
ಪ್ರಸ್ತುತ ಮೇಯರ್ ಮತ್ತು ಉಪಮೇಯರ್ ಮತದಾರರ ಪಟ್ಟಿಯಲ್ಲಿ 262 ಮಂದಿ ಮತದಾರರಿದ್ದು, 132 ಮ್ಯಾಜಿಕ್ ಸಂಖ್ಯೆಯಾಗಿದೆ. ಬಿಜೆಪಿಯಲ್ಲಿ ಬಿಬಿಎಂಪಿ ಸದಸ್ಯರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿ 125 ಮತದಾರರಿದ್ದಾರೆ. ಇನ್ನು ಉಳಿದ 7 ಮತಗಳು ಹೊಂದಿಸಲು ಬಿಜೆಪಿ ಹಲವು ರೀತಿಯಲ್ಲಿ ಪ್ರಯತ್ನಕ್ಕೆ ಮುಂದಾಗಿದ್ದು, ಇದರ ನಡುವೆ ಆಪರೇಷನ್ ಕಮಲ ನಡೆಸಲು ತಂತ್ರ ರೂಪಿಸಿದೆ ಎನ್ನಲಾಗಿದೆ.
ಬಿಬಿಎಂಪಿಯಲ್ಲಿ ಮೈತ್ರಿ ಪಕ್ಷಗಳ ವಿರುದ್ಧ ಅಸಮಾಧಾನಗೊಂಡಿರುವ ಜೆಡಿಎಸ್ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ ಹಾಗೂ ದೇವದಾಸ್ ಬಿಜೆಪಿ ಜತೆಗೆ ಗುರುತಿಸಿಕೊಳ್ಳುತ್ತಿದ್ದಾರೆ. ಮೇಯರ್ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ವಿರುದ್ಧವಾಗಿ ಮತ ಹಾಕಬಹುದು ಎಂದು ಅಂದಾಜಿಸಲಾಗಿದೆ.
ಇನ್ನುಳಿದಂತೆ ಪಾಲಿಕೆಯಲ್ಲಿ ಅತೃಪ್ತ ಸದಸ್ಯರನ್ನು ಸೆಳೆಯಲು ಬಿಜೆಪಿ ತಂತ್ರಗಾರಿಕೆ ರೂಪಿಸಿದ್ದು, ಹಿಂಬಾಗಿಲಿನಿಂದ ಕೆಲಸವನ್ನೂ ಆರಂಭಿಸಿದೆ. ಅಲ್ಲದೆ, ಈ ಬಾರಿಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರ ಪಾತ್ರ ನಿರ್ಣಾಯಕವಾಗಿರಲಿದ್ದು, ಬಿಜೆಪಿಯು ಅವರನ್ನು ಸೆಳೆಯಲು ಈಗಾಗಲೇ ಕಾರ್ಯರೂಪಕ್ಕಿಳಿದಿದೆ ಎನ್ನಲಾಗಿದೆ.
ಬಿಜೆಪಿಯು ಎಷ್ಟೇ ರೀತಿಯಲ್ಲಿ ಅಧಿಕಾರ ಹಿಡಿಯಲು ಮುಂದಾದರೂ ಅದು ಫಲ ನೀಡುವುದಿಲ್ಲ. ಅವರ ಆಪರೇಷನ್ ಕಮಲ ಇಲ್ಲಿ ಕೂಡಿಬರುವುದಿಲ್ಲ. ನಾಲ್ಕು ಬಾರಿಯಂತೆ ಈ ಬಾರಿಯೂ ಮೈತ್ರಿ ಪಕ್ಷಗಳಿಗೆ ಅಧಿಕಾರ ಸಿಗುತ್ತದೆ. ನಮ್ಮವರೇ ಬಿಬಿಎಂಪಿಯಲ್ಲಿ ಮೇಯರ್ ಹಾಗೂ ಉಪ ಮೇಯರ್ ಆಗಲಿದ್ದಾರೆ.
-ಎಂ.ಶಿವರಾಜು, ಮಾಜಿ ಆಡಳಿತ ಪಕ್ಷದ ನಾಯಕ
ಒಟ್ಟು ಮತದಾರರು: 262
ಮ್ಯಾಜಿಕ್ ನಂಬರ್: 132
ಕಾಂಗ್ರೆಸ್: ಬಿಬಿಎಂಪಿ ಸದಸ್ಯರು: 76
ಲೋಕಸಭಾ ಸದಸ್ಯರು: 1
ರಾಜ್ಯಸಭಾ ಸದಸ್ಯರು: 6
ಶಾಸಕರು: 15
ವಿಧಾನಪರಿಷತ್ ಸದಸ್ಯರು: 10
ಒಟ್ಟು: 108
ಜೆಡಿಎಸ್: ಬಿಬಿಎಂಪಿ ಸದಸ್ಯರು: 14
ಲೋಕಸಭಾ ಸದಸ್ಯರು: 00
ರಾಜ್ಯಸಭಾ ಸದಸ್ಯರು: 1
ಶಾಸಕರು: 2
ವಿಧಾನಪರಿಷತ್ ಸದಸ್ಯರು: 5
ಒಟ್ಟು: 22
ಬಿಜೆಪಿ: ಬಿಬಿಎಂಪಿ ಸದಸ್ಯರು: 101
ಲೋಕಸಭಾ ಸದಸ್ಯರು: 4
ರಾಜ್ಯಸಭಾ ಸದಸ್ಯರು: 2
ಶಾಸಕರು: 11
ವಿಧಾನಪರಿಷತ್ ಸದಸ್ಯರು: 7
ಒಟ್ಟು: 125
ಪಕ್ಷೇತರ ಸದಸ್ಯರು: 07







