‘ಕೋಪಗೊಂಡಿರುವ ಮಗು ಟ್ರಂಪ್’ ರೂಪದ ಬಲೂನು ಹಾರಿಸಿ ಪ್ರತಿಭಟನೆ

ಲಂಡನ್, ಜೂ. 4: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಬ್ರಿಟನ್ ಪ್ರವಾಸವನ್ನು ವಿರೋಧಿಸುತ್ತಿರುವ ಜನರು ಮಂಗಳವಾರ ಲಂಡನ್‌ನಲ್ಲಿರುವ ಬ್ರಿಟಿಶ್ ಸಂಸತ್ತಿನ ಹೊರಗೆ ‘ಕೋಪಗೊಂಡಿರುವ ಮಗು’ವಿನ ರೂಪದ ಬೃಹತ್ ಬಲೂನೊಂದನ್ನು ಹಾರಿಸಿದ್ದಾರೆ. ಇದರ ಬೆನ್ನಿಗೇ ಟ್ರಂಪ್ ವಿರುದ್ಧ ಪ್ರತಿಭಟನೆಯನ್ನೂ ಆರಂಭಿಸಿದ್ದಾರೆ. ಇದು ವಿದೇಶಿ ನಾಯಕರೊಬ್ಬರ ವಿರುದ್ಧ ಲಂಡನ್‌ನಲ್ಲಿ ನಡೆಯುತ್ತಿರುವ ಅತಿ ದೊಡ್ಡ ಪ್ರತಿಭಟನೆಯಾಗಿದೆ.
ಬ್ರಿಟನ್‌ನ ನಿರ್ಗಮನ ಪ್ರಧಾನಿ ತೆರೇಸಾ ಮೇ ಜೊತೆ ಅವರ ಅಧಿಕೃತ ನಿವಾಸ ಡೌನಿಂಗ್ ಸ್ಟ್ರೀಟ್‌ನಲ್ಲಿ ಟ್ರಂಪ್ ಮಾತುಕತೆ ಆರಂಭಿಸಿದಾಗ, 6 ಮೀಟರ್ ಎತ್ತರದ ಬಲೂನನ್ನು ಸಂಸತ್ ಚೌಕದಲ್ಲಿ ಹಾರಿಸಲಾಯಿತು.
ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಮೂರು ದಿನಗಳ ಬ್ರಿಟನ್ ಪ್ರವಾಸಕ್ಕಾಗಿ ಸೋಮವಾರ ಲಂಡನ್‌ಗೆ ಆಗಮಿಸಿದ್ದಾರೆ. ಸೋಮವಾರ ಸಂಜೆ ಬ್ರಿಟನ್ ರಾಣಿ ಎಲಿಝಬೆತ್ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಟ್ರಂಪ್ ಮತ್ತು ಅವರ ಬಳಗಕ್ಕೆ ಔತಣಕೂಟವೊಂದನ್ನು ಏರ್ಪಡಿಸಿದರು.
ಚಿನ್ನದ ಶೌಚಾಲಯದಲ್ಲಿ ಕುಳಿತಿರುವ, ಟ್ರಂಪ್‌ರನ್ನು ಹೋಲುವ 16 ಅಡಿ ಎತ್ತರದ ಮಾತಾಡುವ ರೋಬೊಟೊಂದನ್ನು ಮಂಗಳವಾರ ಲಂಡನ್‌ನ ಟ್ರಾಫಲ್‌ಗರ್ ಚೌಕದಲ್ಲಿ ಸ್ಥಾಪಿಸಲಾಗಿದೆ.
ಟ್ರಂಪ್‌ರ ‘‘ಪರಿಸರ ನೀತಿಗಳು, ಜನಾಂಗೀಯವಾದಿ ಧೋರಣೆಗಳು ಮತ್ತು ಮಹಿಳಾ ವಿರೋಧಿ ನೀತಿ’’ಗಳನ್ನು ಪ್ರತಿಭಟನಕಾರರು ಪ್ರತಿಭಟಿಸುತ್ತಿದ್ದಾರೆ. ಹಲವು ಮುಸ್ಲಿಮ್ ಪ್ರಾಬಲ್ಯದ ದೇಶಗಳ ಜನರಿಗೆ ಅಮೆರಿಕ ಪ್ರವೇಶ ನಿರಾಕರಣೆ, ಹವಾಮಾನ ಬದಲಾವಣೆ ಕುರಿತ ಜಾಗತಿಕ ಒಪ್ಪಂದದಿಂದ ಅಮೆರಿಕ ಹಿಂದೆ ಬಂದಿರುವುದು ಹಾಗೂ ಬ್ರಿಟಿಶ್ ರಾಜಕಾರಣಿಗಳನ್ನು ಟ್ರಂಪ್ ಟೀಕಿಸುತ್ತಿರುವುದರ ವಿರುದ್ಧ ಪ್ರತಿಭಟನಕಾರರು ಧ್ವನಿಯೆತ್ತಿದ್ದಾರೆ.







