ಕಬ್ಬಿನ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ರೈತರಿಂದ ಧರಣಿ

ಬೆಂಗಳೂರು, ಜೂ.4: ಕಬ್ಬಿನ ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು, ಬ್ಯಾಂಕ್‌ಗಳ ಕಿರುಕುಳವನ್ನು ತಪ್ಪಿಸಬೇಕು ಎಂದು ಆಗ್ರಹಿಸಿ ನೂರಾರು ಸಂಖ್ಯೆಯಲ್ಲಿ ರೈತರು ಬೃಹತ್ ಪ್ರತಿಭಟನಾ ವೆುರವಣಿಗೆ ನಡೆಸಿ, ಸರಕಾರವನ್ನು ಒತ್ತಾಯಿಸಿದರು.
ರಾಜ್ಯ ಕಬ್ಬು ಬೆಳಗಾರರ ಒಕ್ಕೂಟದ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರೈತರ ವೆುರವಣಿಗೆ ಆರಂಭವಾಯಿತು. ನಗರದ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಲವು ರೈತರು ಅರೆಬೆತ್ತಲೆಯಾಗಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದ್ದರೂ ಬ್ಯಾಂಕ್‌ಗಳಿಂದ ರೈತರಿಗೆ ಕಾಟ ನೀಡುತ್ತಿದ್ದಾರೆ. ಸಾಲ ಮರು ಪಾವತಿಸುವಂತೆ ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಅಲ್ಲದೆ, ರೈತರಿಗೆ ಹೊಸ ಮುಂಗಾರು ಕೃಷಿಗೆ ಸಾಲ ಸಿಗುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ 8 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳು ನೀರಿಲ್ಲದೆ ಒಣಗಿ ಹೋಗಿದೆ. ಸರಕಾರ ಕೊಳವೆ ಬಾವಿ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ಕಬ್ಬು ಬೆಳೆಗಾರರಿಗೆ 3 ಸಾವಿರ ಕೋಟಿ ರೂಪಾಯಿ ಹಣ ಬಾಕಿ ಇದೆ. ಕಾರ್ಖಾನೆ ಮಾಲಕರು 6 ತಿಂಗಳಾದರೂ ಬಾಕಿ ನೀಡಿಲ್ಲ. ಕಬ್ಬಿನ ಎಫ್‌ಆರ್‌ಪಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ತುಂಬಲಾರದ ನಷ್ಟವಾಗುತ್ತಿದೆ ಎಂದರು.
2018-19 ನೇ ಸಾಲಿನ ಎಸ್‌ಎಪಿ ದರ ನಿಗದಿಗೊಳಿಸಿ ಕಬ್ಬಿನ ಉತ್ಪನ್ನಗಳ ಲಾಭದಲ್ಲಿ ಹಂಚಿಕೆ ಮಾಡಿ ರೈತರಿಗೆ ಹೆಚ್ಚುವರಿ ಹಣ ಕೊಡಿಸಲು ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆಗಾರರಿಗೆ ಬಾಕಿಯಿರುವ ಹಣ ಪಾವತಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಕಾರ್ಖಾನೆ ಮಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ರಾಜ್ಯದ 67 ಸಕ್ಕರೆ ಕಾರ್ಖಾನೆಗಳಲ್ಲಿ 2018-19ನೇ ಸಾಲಿನವರೆಗೆ ಅಂದಾಜು 4 ಕೋಟಿ ಟನ್ ಕಬ್ಬನ್ನು ಬಳಸಿಕೊಳ್ಳಲಾಗಿದೆ. ರೈತರಿಗೆ ಅಂದಾಜು 3 ಸಾವಿರ ಕೋಟಿ ಹಣ ಪಾವತಿಸಬೇಕಿದೆ. ಕಬ್ಬು ಸಕ್ಕರೆ ನಿಯಂತ್ರಣ ಕಾಯ್ದೆಯನ್ವಯ ಕಬ್ಬು ಪೂರೈಕೆ ಮಾಡಿದ ರೈತರಿಗೆ 14 ದಿನಗಳಲ್ಲಿ ಹಣ ಪಾವತಿಸಬೇಕೆನ್ನುವ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಕಳೆದ 6 ತಿಂಗಳಿಂದ ರೈತರ ಕಬ್ಬು ಹಣ ಪಾವತಿಸಿಲ್ಲ. ಮಾಲಕರು ಉತ್ಪಾದನೆಯಾದ ಸಕ್ಕರೆಯ ಮೌಲ್ಯದ ಶೇ. 80 ರಷ್ಟು ಸಾಲ ಪಡೆದಿರುವ ಕಾರ್ಖಾನೆಗಳು ರೈತರ ಕಬ್ಬು ಬೆಳೆ ಹಣ ಪಾವತಿಸಿಲ್ಲ ಎಂದ ಅವರು, ರಾಜ್ಯದಲ್ಲಿ 8 ಲಕ್ಷ ಕೊಳವೆಬಾವಿಗಳು ಬತ್ತಿಹೋಗಿವೆ. ರೈತರು ಬೆಳೆ ನಷ್ಟಕ್ಕೊಳಗಾಗಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ತಿಳಿಸಿದರು.







