ತುಮಕೂರು ನಗರದಾದ್ಯಂತ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ತುಮಕೂರು, ಜೂ.5: ಶಾಂತಿ-ಸೌಹಾರ್ದತೆಯ ಪ್ರತೀಕವಾದ ಮುಸ್ಲಿಮರ ಪವಿತ್ರ ಹಬ್ಬ ಈದುಲ್ ಫಿತ್ರ್ ಅನ್ನು ನಗರದಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೊಹಲ್ಲಾದ ಬಳಿ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹೊಸ ಉಡುಪುಗಳನ್ನು ಧರಿಸಿದ್ದ ಮುಸ್ಲಿಮರು ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದ ರಿಂಗ್ ರಸ್ತೆಯ ಫಾತಿಮಾ ಮಸೀದಿ, ಕ್ಯಾತ್ಸಂದ್ರ ಈದ್ಗಾ ಮೊಹಲ್ಲಾ, ಮರಳೂರು ದಿಣ್ಣೆಯ ಈದ್ಗಾ ಮೊಹಲ್ಲಾ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಈದ್ಗಾ ಮೊಹಲ್ಲಾಗಳಿಗೆ ತೆರಳಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.
ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೊಹಲ್ಲಾಕ್ಕೆ ಸಂಸದ ಜಿ.ಎಸ್. ಬಸವರಾಜು ಅವರು ಭೇಟಿ ನೀಡಿ ಹಬ್ಬದ ಶುಭಾಶಯ ಕೋರಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲಾ poಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಡಿವೈಎಸ್ಪಿ ತಿಪ್ಪೇಸ್ವಾಮಿ ಅವರು ಸಹ ಈದ್ಗಾ ಮೊಹಲ್ಲಾಕ್ಕೆ ಭೇಟಿ ನೀಡಿ ಹಬ್ಬದ ಶುಭಾಶಯ ಕೋರಿದರು.
ಮಾಜಿ ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ಶಫಿ ಅಹಮದ್, ಮುಷ್ತಾಕ್ ಅಹಮದ್, ಶಬ್ಬೀರ್, ನಯಾಜ್ ಅಹಮ್ಮದ್, ಹೊನ್ನುಡಿಕೆ ಲೋಕೇಶ್ ಬಿಳಿಗೆರೆ ಶಿವಕುಮಾರ್, ಜಕಣಾಚಾರಿ ಮತ್ತಿತರರು ಪಾಲ್ಗೊಂಡಿದ್ದರು.







