ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದರೆ ಶೇ.100ರಷ್ಟು ಗೆಲುವು ಖಚಿತ: ಮುರಳೀಧರ ರಾವ್

ಬೆಂಗಳೂರು, ಜೂ.5: ದೇಶ ಸೇವೆ ಮಾಡುವ ಮನಸ್ಸಿದ್ದರೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲಿ. ಯಾರೇ ಬಿಜೆಪಿಗೆ ಬಂದರೂ ಶೇ.100ರಷ್ಟು ಗೆಲುವು ಖಚಿತವೆಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ತಿಳಿಸಿದ್ದಾರೆ.
ಬುಧವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ಅಭಿನಂದನಾ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ಕೈ ಶಾಸಕರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲಿ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದರೆ ಏನಾಗುತ್ತಾರೆ ಎಂಬುದಕ್ಕೆ ಉಮೇಶ್ ಜಾಧವ್ ಉದಾಹರಣೆಯಾಗಿದ್ದಾರೆ ಎಂದರು.
ಕರ್ನಾಟಕದ ಮೈತ್ರಿ ಸರಕಾರಕ್ಕೆ ಜನಾದೇಶವಿಲ್ಲ. ಈ ಲೋಕಸಭಾ ಚುನಾವಣೆಯಲ್ಲೂ ಜನ ಇವರನ್ನು ತಿರಸ್ಕರಿಸಿದ್ದಾರೆ. ಮೈತ್ರಿ ಸರಕಾರವನ್ನು ಉರುಳಿಸಲು ಅಪರೇಷನ್ ಕಮಲ ಅಗತ್ಯವಿಲ್ಲ. ಈ ಸರಕಾರ ಯಾವಾಗ ಬೇಕಾದರೂ ಪತನವಾಗಬಹುದು. ಒಂದು ಬೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದಿನ 50 ವರ್ಷ ಅಧಿಕಾರದಲ್ಲಿ ಇರುತ್ತದೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಮುಂದಿನ ಐದು ವರ್ಷ ಮಲಗಿ ನಿದ್ರಿಸಲಿ. ಎಚ್.ಡಿ ದೇವೇಗೌಡ, ಸಿದ್ದರಾಮಯ್ಯಗೆ ರಾಜಕೀಯ ಸನ್ಯಾಸ ಸೂಕ್ತ. ಸನ್ಯಾಸಿಯಾಗಬೇಕಿದ್ದವರು ಗೆದ್ದು ಪ್ರಧಾನಿಯಾದರು. ಪ್ರಧಾನಿ ಆಗಬೇಕೆಂದು ಹಗಲು ಕನಸು ಕಾಣುತ್ತಿದ್ದವರು ಸನ್ಯಾಸಿಯಾಗುವ ಸ್ಥಿತಿ ಬಂದಿದೆ ಎಂದು ಅವರು ವ್ಯಂಗ್ಯವಾಡಿದರು.





