ಅಧಿಕ ವಾಹನಗಳ ಸಂಚಾರದಿಂದ ವಾಯುಮಾಲಿನ್ಯ: ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್

ಬೆಂಗಳೂರು: ನಗರದಲ್ಲಿ ಪ್ರತಿನಿತ್ಯ 85 ಲಕ್ಷಕ್ಕೂ ಅಧಿಕ ವಾಹನಗಳ ಸಂಚಾರದಿಂದ ವಾಯುಮಾಲಿನ್ಯ ಹೆಚ್ಚಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದರು.
ಶಿಲ್ಪಾ ಪೌಂಡೇಷನ್, ನಗರದ ವಿಕ್ಟೋರಿಯಾ ಲೇಔಟ್ ನ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನಂತಹ ಮಹಾ ನಗರದಲ್ಲಿ ಇಂದು ಮರ-ಗಿಡಗಳನ್ನು ನಾಶ ಪಡಿಸುತ್ತಿರುವ ಜೊತೆಗೆ ಕೆರೆ-ಕುಂಟೆಗಳು ಕಣ್ಮರೆಯಾಗುತ್ತಿರುವ ವರದಿಗಳ ಕುರಿತು ಬೇಸರ ವ್ಯಕ್ತಪಡಿಸಿದ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್, ಪರಿಸರದಲ್ಲಿ ಕಾಂಕ್ರಿಟೀಕರಣದಿಂದ ಉಷ್ಣಾಂಶ ಹೆಚ್ಚಾಗುತ್ತಿದೆ, ಹಸಿರು ಪರಿಸರ ಉಳಿಸಿಕೊಳ್ಳುವ ಹೊಣೆಗಾರಿಕೆ ವರ್ತಮಾನದಲ್ಲಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಿಲ್ಪಾ ಪೌಂಡೇಷನ್ ಪರಿಸರ ಜಾಗೃತಿ ಹಾಗೂ ಪರಿಸರ ಸ್ನೇಹಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
“ನಾನು ಸರ್ಕಾರಿ ಶಾಲೆಯಲ್ಲಿ ಕಲಿತವನು, ಆದ್ದರಿಂದ ವಿಶ್ವ ಪರಿಸರ ದಿನದಂದು ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡ ನೆಡುತ್ತಿರುವುದು ನನಗೆ ಹೆಮ್ಮೆಯ ಸಂಗತಿ”
-ಟಿ ಸುನೀಲ್ ಕುಮಾರ್, ಬೆಂಗಳೂರು ನಗರ ಪೊಲೀಸ್ ಆಯುಕ್ತರು.
ಶಿಲ್ಪಾ ಪೌಂಡೇಷನ್, ವಿಕ್ಟೋರಿಯಾ ಲೇಔಟ್ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಯೋಜಿಸಿತ್ತು. ಈ ಸಂದರ್ಭದಲ್ಲಿ ವಿಕ್ಟೋರಿಯಾ ಲೇಔಟ್ ನಲ್ಲಿರುವ ಸರ್ಕಾರಿ ಪ್ರಾಥಮಿಕ ಪಾಠ ಶಾಲಾವರಣದಲ್ಲಿ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಗಿಡ ನೆಟ್ಟು, ಶಾಲಾ ಮಕ್ಕಳಿಗೆ ಶಿಲ್ಪಾ ಪೌಂಡೇಷನ್ ಪರವಾಗಿ ಸಮವಸ್ತ್ರಗಳನ್ನು ವಿತರಿಸಿದರು ಹಾಗೂ ಫಿಡಿಲಿಟಸ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಮೂಡಿಸುವ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಸ್ಕಾಂ(ಜಾಗೃತ ದಳ) ಎಸ್ಪಿ ಎಂ.ನಾರಾಯಣ, ಶಿಲ್ಪಾ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟೀ ಅಚ್ಯುತ್ ಗೌಡ, ಪತ್ರಕರ್ತ ಮತ್ತು ಚಲನಚಿತ್ರ ನಿರ್ದೇಶಕರಾದ ಡಾ ಅರುಣ್ ಹೊಸಕೊಪ್ಪ ಹಾಗೂ ಗಣ್ಯರಾದ ಡಾ ಕೆ ಹೆಚ್ ಮರಿಯಪ್ಪ, ಟಿ ಬಿ ರಾಜಶೇಖರ್ ಹಾಜರಿದ್ದರು.












