ಸಂಪನ್ಮೂಲಗಳ ಮಿತ ಬಳಕೆಯಿಂದ ಪರಿಸರ ರಕ್ಷಣೆ ಸಾಧ್ಯ: ನ್ಯಾ.ಜೋಷಿ

ಉಡುಪಿ, ಜೂ.5: ಪ್ರಕೃತಿಯಲ್ಲಿರುವ ಎಲ್ಲಾ ಬಗೆಯ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಮೂಲಕ, ಮಾನವರು ತಮ್ಮ ಅಗತ್ಯತೆಗಳನ್ನು ಪೂರೈಸಿ ಕೊಂಡರೆ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ.ಜೋಷಿ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ, ಪಡುಬಿದ್ರೆಯ ರಮೇಶ್ ಮಹಾಬಲ ಶೆಟ್ಟಿ ಸಭಾಭವನದಲ್ಲಿ (ಬಂಟರ ಭವನ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕರಾವಳಿ ನಿಯಂತ್ರಣ ಪ್ರಾಧಿಕಾರ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ದೈನಂದಿನ ಜೀವನದಲ್ಲಿ ಪರಿಸರದ ಉಪಯೋಗ ಮತ್ತು ಸಂಪನ್ಮೂಲಗಳ ಮಿತ ಬಳಕೆಯನ್ನು ಕಾಣಬಹುದಾಗಿದೆ. ನಮ್ಮ ಅಗತ್ಯ ಕ್ಕನುಗುಣವಾಗಿ ಮಾತ್ರ ಸಂಪನ್ಮೂಲಗಳನ್ನು ಬಳಸಬೇಕು. ಪ್ರಾಕೃತಿಕ ಸಂಪನ್ಮೂಲ ಗಳನ್ನು ಐಶಾರಾಮಿ ಜೀವನಕ್ಕೆ ಬಳಸಲು ಮಾನವನಿಗೆ ಯಾವುದೇ ಅಧಿಕಾರವಿಲ್ಲ. ಪರಿಸರದ ಜೊತೆ ಕೊಳ್ಳುಬಾಕತನ ನಡೆಸಬಾರದು ಎಂದು ಜಿಲ್ಲಾ ನ್ಯಾಯಾಧೀಶರು ನುಡಿದರು.
ಪರಿಸರದಿಂದ ಪ್ರಯೋಜನ ಪಡೆದ ಮೇಲೆ ಪರಿಸರಕ್ಕೆ ಏನಾದರೂ ಕೊಡುಗೆ ನೀಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಪರಿಸರದಲ್ಲಿ ತ್ಯಾಜ್ಯ ಹರಡುವ ಮೂಲಕ ಪರಿಸರ ಮಾಲಿನ್ಯ ಮಾಡಬಾರದು. ತಮ್ಮ ದೈನಂದಿನ ಚಟುವಟಿಕೆಯಲ್ಲಿ ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸಬೇಕು ಎಂದು ಸಿ.ಎಂ.ಜೋಷಿ ಹೇಳಿದರು.
ಪರಿಸರ ಸಂರಕ್ಷಣೆಯ ದೃಷ್ಠಿಯಿಂದ ಉಡುಪಿ ಜಿಲ್ಲಾಡಳಿತ ಕೈಗೊಂಡಿರುವ ವಾರದಲ್ಲಿ ಒಂದು ದಿನ ಸಮೂಹ ಸಾರಿಗೆ ಬಳಕೆ, ವಾರದಲ್ಲಿ ಒಂದು ದಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಎಸಿ ಬಳಕೆ ನಿಷೇಧ ಕ್ರಮಗಳು ಸ್ವಾಗತಾರ್ಹ. ಪರಿಸರದಲ್ಲಿ ಪ್ಲಾಸ್ಟಿಕ್ ಹರಡದಿರುವ ಬಗ್ಗೆ ಮತ್ತು ಸಭೆ ಸಮಾರಂಭಗಳಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ತ್ಯಾಜ್ಯ ಸೃಷ್ಠಿಸುವುದನ್ನು ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ನ್ಯಾ. ಜೋಷಿ ಹೇಳಿದರು.
ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಕಾವೇರಿ, ಕಾಪು ತಹಶೀಲ್ದಾರ್ ರಶ್ಮಿ, ಡಿಡಿಪಿಐ ಶೇಷಶಯನ ಕಾರಿಂಜ, ಸಿಆರ್‌ಝಡ್ ಪ್ರಾದೇಶಿಕ ನಿರ್ದೇಶಕ ರಮೇಶ್ ಬಾಬು, ಉಡುಪಿ ಬಿಎಓ ಮಂಜುಳಾ, ಪಡುಬಿದ್ರೆ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುಬ್ಬಣ್ಣ, ಯುಪಿಸಿಎಲ್ ಅಧ್ಯಕ್ಷ ಕಿಶೋರ್ ಆಳ್ವಾ ಉಪಸ್ಥಿತರಿದ್ದರು.
ಜಿಲ್ಲಾ ಪರಿಸರ ಅಧಿಕಾರಿ ಡಾ.ಲಕ್ಷ್ಮೀಕಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪರಿಸರ ಅಧಿಕಾರಿ ಊರ್ಮಿಳಾ ಸ್ವಾಗತಿಸಿ, ದೀಪಾ ಉಡುಪ ನಿರೂಪಿಸಿದರು.
ಪರಿಸರ ದಿನಾಚರಣೆ ಪ್ರಯುಕ್ತ ಹೆಜಮಾಡಿ ಟೋಲ್‌ಗೇಟ್‌ನಿಂದ ಪರಿಸರ ಜಾಥಾ ಕಾರ್ಯಕ್ರಮ ನಡೆಯಿತು. ಪರಿಸರ ದಿನಾಚರಣೆ ಅಂಗವಾಗಿ ಉಡುಪಿಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.








