ಗತಕಾಲದ ಘಟನಾವಳಿ ಬದಲಿಸಿ ಹೊಸ ಇತಿಹಾಸ ಬರೆಯುವ ಪ್ರಯತ್ನ: ಡಾ.ಮಹಾಬಲೇಶ್ವರ ರಾವ್ ಕಳವಳ
ಉಡುಪಿ: ಎರಡು ಪ್ರವಾಸ ಕಥನ ಲೋಕಾರ್ಪಣೆ

ಉಡುಪಿ, ಜೂ.5: ನಾವು ಕಲಿತ ಇತಿಹಾಸ ಹಾಗೂ ಗತಕಾಲದ ಘಟನಾವಳಿಗಳನ್ನು ತಿದ್ದುಪಡಿ ಮಾಡಿ ಹೊಸದೊಂದು ಇತಿಹಾಸ ಬರೆಯುವ ಪ್ರಯತ್ನಗಳು ಈಗ ನಡೆಯುತ್ತಿದೆ. ನಮ್ಮ ನಡುವೆ ವಿಭಜನಾತ್ಮಕ ಶಕ್ತಿಗಳು ದೊಡ್ಡ ಮಟ್ಟದಲ್ಲಿ ತಲೆ ಎತ್ತುತ್ತಿರುವುದು ಇಂದಿನ ಅಪಾಯಕಾರಿ ಬೆಳವಣಿಗೆ ಎಂದು ನಾಡಿನ ಖ್ಯಾತ ಶಿಕ್ಷಣ ತಜ್ಞ ಹಾಗೂ ಲೇಖಕ ಡಾ. ಮಹಾಬಲೇಶ್ವರ ರಾವ್ ಕಳವಳ ವ್ಯ್ತಪಡಿಸಿದ್ದಾರೆ.
ನಗರದ ಕುಂಜಿಬೆಟ್ಟಿನಲ್ಲಿರುವ ವೈಕುಂಠ ಬಾಳಿಗಾ ಕಾನೂನು ಕಾಲೇಜು ಸಭಾಂಗಣದಲ್ಲಿ ಬುಧವಾರ, ಉಡುಪಿಯ ಹಿರಿಯ ವಕೀಲ ಹಾಗೂ ಜಿಲ್ಲಾ ವಕೀಲರ ಸಂಘ ಮಾಜಿ ಅಧ್ಯಕ್ಷ ಅಲೆವೂರು ಮಾಧವ ಆಚಾರ್ಯ ಅವರ ಪ್ರವಾಸ ಕಥನ ‘ಹಿಂದೂ ದೇವಾಲಯಗಳ ಮುಸ್ಲಿಂ ರಾಷ್ಟ್ರ ಇಂಡೋನೇಶಿಯಾ’ ಮತ್ತು ‘ಭೂಲೋಕದ ಐಸಿರಿ ಸಿಂಗಾಪುರ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಗಳ್ನು ಪರಿಚಯಿಸಿ ಮಾತನಾಡುತಿದ್ದರು.
ಪ್ರವಾಸ ಕಥನಗಳಲ್ಲಿ ಇತಿಹಾಸವನ್ನು ತಳಸ್ಪರ್ಶಿಯಾಗಿ ಬರೆಯುವ ಗ್ರಹಿಕೆ ಮತ್ತು ಸೂಕ್ಷ್ಮತೆಯ ಅಗತ್ಯವಿದೆ. ಪ್ರೌಢಿಮೆಯುಳ್ಳ ಲೇಖಕ ಎಂದು ತೋರಿಸಿಕೊಳ್ಳುವ ಸಲುವಾಗಿ ಕೆಲವರ ಬರವಣಿಗೆ ಬಿಗಿಯಾಗಿರುತ್ತದೆ. ಆದರೆ ಅಲೆವೂರು ಮಾಧವ ಆಚಾರ್ಯರು ಸರಳ ಭಾಷೆಯಲ್ಲಿ ‘ಹಿಂದು ದೇವಾಲಯಗಳ ಮುಸ್ಲಿಂ ರಾಷ್ಟ್ರ ಇಂಡೋನೇಶಿಯ’ ಮತ್ತು ‘ಭೂಲೋಕದ ಐಸಿರಿ ಸಿಂಗಾಪುರ’ ಕೃತಿಯನ್ನು ಬರೆದಿದ್ದು, ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಅವರ ಸೂಕ್ಷ್ಮ ಗ್ರಹಿಕೆ, ಅವಲೋಕನ ಸಾಮರ್ಥ್ಯ ಮತ್ತು ತನ್ನೂರಿನ ಸನ್ನಿವೇಶಕ್ಕೆ ತಕ್ಕ ಹಾಗೆ ಅನ್ವಯಿಸುವ ರೀತಿಯಲ್ಲಿ ಪ್ರವಾಸ ಕಥನ ಬರೆದಿದ್ದಾರೆ ಎಂದರು.
ಪ್ರವಾಸ ಕಥನದಲ್ಲಿ ಇತಿಹಾಸ ವಿಚಾರಗಳಿಗೆ ಸಾಕಷ್ಟು ಮಹತ್ವವಿರುತ್ತದೆ. ಆ ದೇಶದ ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ಸಾಮಾಜಿಕ, ಭೌಗೋಳಿಕ ವಿಚಾರಕ್ಕೆ ಸಂಬಂಧಿಸಿ ಕಣ್ಣು, ಕಿವಿ, ಮನಸ್ಸು ಮೂರನ್ನು ತೆರೆದಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಮಾಧವ ಆಚಾರ್ಯ ಅವರು ತಮ್ಮ ಕಥನವನ್ನು ಉತ್ತಮಾಗಿ ನಿರೂಪಿಸಿದ್ದಾರೆ ಎಂದು ಬಣ್ಣಿಸಿದರು.
ಇಂಡೋನೇಶಿಯದಲ್ಲಿ ಹಿಂದೂ ದೇವಾಲಯಗಳು ಸಾಕಷ್ಟಿದ್ದು ಅದನ್ನು ಕಾಪಾಡಿಕೊಂಡು ಬಂದ ಕ್ರಮದ ಬಗ್ಗೆ ಪ್ರಶಂಸನೀಯವಾಗಿ ಬರೆದಿದ್ದಾರೆ. ಇಂಡೋನೇಶಿಯ ಜನರು ಸಜ್ಜನ, ಸಭ್ಯತೆ ಹೊಂದಿದವರು ಎಂದು ಕೃತಿಯಲ್ಲಿ ಬಣ್ಣಿಸಿದ್ದಾರೆ ಎಂದರು.
ಭಾರತ, ಇಂಡೋನೇಶಿಯಾ, ಜಾವಾ, ಮಾಲ್ಡೀವ್, ಬರ್ಮಾ, ಶ್ರೀಲಂಕಾ ಹಾಗೂ ನೇಪಾಳ ಈ ಎಲ್ಲಾ ದೇಶಗಳಲ್ಲಿ ಆರಂಭದಲ್ಲಿ ಒಂದೇ ಬಗೆಯ ಸಂಸ್ಕೃತಿ, ಆಚಾರ ವಿಚಾರಗಳೆಲ್ಲವೂ ಇದ್ದವು. ಜನರ ವಲಸೆ ಪ್ರವೃತ್ತಿಯಿಂದಾಗಿ ಆಯಾ ಪ್ರದೇಶಗಳ ಸಂಸ್ಕೃತಿ, ಆಚಾರಗಳಲ್ಲಿ ಒಂದಿಷ್ಟು ರೂಪಾಂತರಗೊಂಡು ವ್ಯತ್ಯಾಸಗಳಾಗಿವೆ. ಇದು ಬಹುಸಾಂಸ್ಕೃತಿಕತೆಯಿಂದ ಮನೋಸಾಂಸ್ಕೃತಿಕದ ಕಡೆಗೆ ಒಲುವು ತೋರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಅಘಾತಕಾರಿ ಬೆಳವಣಿಗೆ ಎಂದರು.
ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ರಾಮಾಯಣದ ನಾನಾ ಪರಂಪರೆಗಳಿವೆ. ಇಂತಹ 300 ರಾಮಾಯಣಗಳು ಜಗತ್ತಿನಲ್ಲಿವೆ. ಇಂಡೋನೇಶಿಯಾ ಒಂದು ಮುಸ್ಲಿಂ ರಾಷ್ಟ್ರವಾಗಿದ್ದರೂ ಪರಂಪರೆಯಿಂದ ಬಂದ ದೇವಾಲಯಗಳನ್ನು ಹಾಗೆ ಕಾಪಾಡಿಕೊಂಡು ಬಂದಿದೆ. ಇದು ನಾವು ನೋಡಿ ಕಲಿಯಬೇಕಾದ ಪಾಠ. ಆ ಸಲುವಾಗಿ ಮಾಧವ ಆಚಾರ್ಯರ ಈ ಕೃತಿ ಬಹಳ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿಂದೆಲ್ಲ ಸೀಮೋಲಂಘನ ಮಾಡುವುದು ಸಾಂಪ್ರದಾಯಕ್ಕೆ ವಿರೋಧ ವಾಗಿದ್ದ ಹಿನ್ನೆಲೆಯಲ್ಲಿ ಪ್ರವಾಸ ಕಥಗಳು ಕೇವಲ ರಾಜ್ಯ, ದೇಶಕ್ಕೆ ಸೀಮಿತ ವಾಗಿದ್ದವು. ಇಂದು ಸಾಧನ ಸಂಪರ್ಕ ಹಾಗೂ ಹಣಕಾಸು ಸಮೃದ್ಧಿಯಾಗಿದ್ದು, ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲಿನ ಪ್ರೇಕ್ಷಣಿಯ ಸ್ಥಳಗಳನ್ನು ಅನುಭವಿಸಿ ಬರೆಯುವ ಪ್ರವಾಸ ಕಥನಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಪ್ರವಾಸ ಕಥನಗಳನ್ನು ಬರೆಯುವವರು ಡಾ.ಶಿವರಾಮ ಕಾರಂತರ ಪ್ರವಾಸ ಕಥನವನ್ನು ಅಧ್ಯಯನ ನಡೆಸಿ, ತಳಸ್ಪರ್ಶದಿಂದ ಬರೆಯುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಡಾ.ರಾವ್ ಸಲಹೆ ನೀಡಿದರು.
ಇಂಡೋನೇಶಿಯಾದಲ್ಲಿ ಇಂಜಿನಿಯರ್ ಆಗಿರುವ ಭಾರತ ಮೂಲದ ರಾಮ್‌ಮೋಹನ್ ಕಾಮತ್ ಕೃತಿಗಳನ್ನು ಬಿಡುಗಡೆಗೊಳಿಸಿದರು. ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ ಅಧ್ಯಕ್ಷತೆ ವಹಿಸಿದ್ದರು. ಕೊಯಮುತ್ತೂರಿನ ನಿವೃತ್ತ ಜಿಲ್ಲಾ ನ್ಯಾಯಾಧೀಶ ಜೆ.ವಿ.ರಾಜ್ ಮತ್ತು ಜಮ್ಮು ಗೋ ಏರ್‌ಲೈನ್ಸ್ ಸಂಸ್ಥೆ ವ್ಯವಸ್ಥಾಪಕ ಬಿ.ಎನ್ ಸೊಹಲ್, ಮಾಧವ ಆಚಾರ್ಯರ ಹಿರಿಯ ಸಹೋದರ ಸುಂದರ ಆಚಾರ್ಯ ಉಪಸ್ಥಿತ ರಿದ್ದರು.
ಕೃತಿ ಲೇಖಕ ಹಾಗೂ ವಕೀಲ ಅಲೆವೂರು ಮಾಧವ ಆಚಾರ್ಯ ಸ್ವಾಗತಿಸಿದರು. ಪ್ರತೀಕ್ಷಾ ವಿ. ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಲೋಲಾಕ್ಷ ಕಾರ್ಯಕ್ರಮ ನಿರೂಪಿಸಿ ವಕೀಲ ಸುಹಾನ್ ವಂದಿಸಿದರು.







