ಮೂಡಿಗೆರೆಯ ಎಲ್ಲೆಡೆ ಈದುಲ್ ಫಿತ್ರ್ ಸಡಗರ

ಮೂಡಿಗೆರೆ: ಈದುಲ್ ಫಿತ್ರ್ ಹಬ್ಬವನ್ನು ಮೂಡಿಗೆರೆಯ ಎಲ್ಲೆಡೆ ಮುಸ್ಲಿಮರು ಬುಧವಾರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಜಾಮಿಯಾ ಮಸೀದಿ, ಬದ್ರಿಯಾ ಮಸೀದಿ ಸೇರಿದಂತೆ ವಿವಿಧ ಎಲ್ಲಾ ಮಸೀದಿಗಳಲ್ಲೂ ಈದುಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಶ್ವೇತವರ್ಣದ ಹೊಸ ಹೊಸ ಬಟ್ಟೆಗಳನ್ನು ಧರಿಸಿದ್ದ ಮಕ್ಕಳು, ಹಿರಿಯರು ಸಡಗರದೊಂದಿಗೆ ಹಬ್ಬ ಆಚರಿಸಿದರು.
ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ನಮಾಝ್ ವೇಳೆ ಖತೀಬ್ ಯಾಕೂಬ್ ದಾರಿಮಿ ಮಾತನಾಡಿ, ಪುಣ್ಯದ ಫಲ ಸಿಗಬೇಕಾದರೆ ಸನ್ಮಾರ್ಗದಲ್ಲಿ ಸಾಗಬೇಕು. ಕ್ರಮಬದ್ಧವಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಬೇಕು. ದಾನ ಅಥವಾ ಕೊಡುಗೆ ನೀಡುವುದು ಧರ್ಮದ ಭಾಗವಾಗಿದೆ. ಉಳ್ಳವರು ಬಡವರ ಸಂಕಷ್ಟಗಳಿಗೆ ನೆರವಾಗಬೇಕು ಎಂದರು.
ಚಿನ್ನಿಗ-ಜನ್ನಾಪುರ, ಬಿದರಹಳ್ಳಿ, ಬಣಕಲ್, ಗೋಣಿಬೀಡು, ಬಿಳಗುಳ, ಅರಳಿಗಂಡಿ, ಹ್ಯಾಂಡ್‍ಪೋಸ್ಟ್, ಚಕ್ಕಮಕ್ಕಿ, ಕೊಟ್ಟಿಗೆಹಾರ, ಕೃಷ್ಣಾಪುರ, ಅಣಜೂರು, ಹಂಡುಗಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ, ಸಂಬಂಧಿಕರ ಮನೆ ಮನೆಗೆ ತೆರಳಿ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು. ವಿವಿಧೆಡೆ ಜನಪ್ರತಿನಿಧಿಗಳು ಈದುಲ್ ಫಿತ್ರ್ ಶುಭಾಶಯದ ಫ್ಲೆಕ್ಸ್ ಗಳನ್ನು ಹಾಕುವ ಮೂಲಕ ಗಮನ ಸೆಳೆದರು.





