ಅಭಿಯಾನದ ಮೂಲಕ ಪರಿಸರ ಸಂರಕ್ಷಣೆ ಸಾಧ್ಯ: ಜೀವನದಾಸ್ ಶೆಟ್ಟಿ

ಉಡುಪಿ, ಜೂ.7: ಪ್ರಕೃತಿ ಉಳಿಸುವ ಅಭಿಯಾನ ಪ್ರತಿಯೊಬ್ಬರ ಮನ ಹಾಗೂ ಮನೆಯಲ್ಲಿ ಮೂಡಿದಾಗ ಪರಿಸರ ಸಂರಕ್ಷಣೆ ಸಾಧ್ಯ ಎಂದು ಅರಣ್ಯಾಧಿಕಾರಿ ಜೀವನದಾಸ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನ, ಸುಮನಸಾ ಸಂಸ್ಥೆ, ಅರಣ್ಯ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜೂ.5ರಂದು ಕೊಡವೂರು ದೇವಳದ ವಠಾರದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ದೇಶದ ಜನಸಂಖ್ಯೆಯ ಶೇ.33ರಷ್ಟು ಅರಣ್ಯ ಪ್ರದೇಶ ಇರಬೇಕಿತ್ತು. ಆದರೆ ಈಗ ಅರಣ್ಯ ಸಂಪತ್ತು ತೀರಾ ಕಡಿಮೆ ಆಗಿದೆ. ಹೀಗಾಗಿ ಹಸಿರು ಬೆಳೆಸಿ ಉಳಿಸುವ ಕೆಲಸ ಕಾರ್ಯಗಳನ್ನು ಪ್ರತಿಯೊಬ್ಬ ನಾಗರಿಕ ತನ್ನ ಕರ್ತವ್ಯವೆಂಬಂತೆ ಮಾಡಬೇಕಾಗಿದೆ ಎಂದರು.
ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ಆಧುನಿಕತೆಯ ನೆಪದಲ್ಲಿ ಒಂದೊಂದು ಮರ ಉರುಳಿದಾಗ ಎರಡೆರಡು ಸಸಿನೆಡುವ ಸಂಕಲ್ಪ ಮಾಡಿದರೆ ಮಾತ್ರ ಮುಂದಿನ ಜನಾಂಗ ಶುದ್ಧ ಗಾಳಿ, ನೀರು, ಆಹಾರ ಪಡೆಯಲು ಸಾಧ್ಯ ಎಂದು ತಿಳಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭಾಸ್ಕರ ಬಾಚನಬೈಲ್, ಎ.ರಾಜ ಶೇರಿಗಾರ, ದೇವಳದ ಪಿಆರ್‌ಒ ಉಮೇಶ್ ರಾವ್, ನಗರಸಭಾ ಸದಸ್ಯ ವಿಜಯ ಕೊಡವೂರು, ಕಸಾಪ ಉಡುಪಿ ತಾಲೂಕು ಗೌರವ ಕಾರ್ಯ ದರ್ಶಿ ಪೂರ್ಣಿಮಾ ಜನಾರ್ದನ್, ಕೊಡವೂರು ಹಿರಿಯ ಪ್ರಾಥಮಿಕ ಶಾಲಾ ಹಿರಿಯ ಶಿಕ್ಷಕಿ ಮಲ್ಲಿಕಾ ಕೊಡವೂರು, ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ಸರೋಜಿನಿ ಉಪಸ್ಥಿತರಿದ್ದರು.
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಸದಸ್ಯ ಜನಾರ್ದನ ಕೊಡವೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







