ಮಂಗಳೂರು: ಜೂ.8ರಿಂದ 12ರವರೆಗೆ ನೀರು ಪೂರೈಕೆ
ಮಂಗಳೂರು, ಜೂ.7:ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಪ್ರಸ್ತುತ ನೀರಿನ ಅಭಾವವಿರುವ ಹಿನ್ನಲೆಯಲ್ಲಿ ಅನುಸರಿಸಲಾಗುತ್ತಿರುವ ಪಡಿತರ ಪದ್ಧತಿಯನ್ನು ಪರಿಷ್ಕರಿಸಲಾಗಿದೆ.
ಅಂದರೆ ಜೂ.6ರಿಂದ ಜೂ.9ರವರೆಗೆ ನೀರು ಪೂರೈಕೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಲಾಗಿತ್ತು. ಅಂದರೆ ಇದೀಗ ಜೂ.8ರಂದು ಮುಂಜಾನೆ 6 ಗಂಟೆಯಿಂದ 12ರಂದು ಮುಂಜಾನೆ 6 ಗಂಟೆಯವರೆಗೆ (96 ಗಂಟೆಗಳ ಕಾಲ) ನೀರು ಸರಬರಾಜು ಮಾಡಲಾಗುವುದು.
ಜೂ.5ರಂದು ಮಳೆಯಾಗಿರುವುದರಿಂದ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ಅಲ್ಪಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಪಡಿತರ ಪದ್ದತಿಯನ್ನು ಪರಿಷ್ಕರಿಸಲಾಗಿದೆ. ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ ಈ ಹಿಂದೆ ಪೂರೈಕೆ ಮಾಡುತ್ತಿರುವ ರೀತಿಯಲ್ಲಿ (ವಾರ್ಡ್‌ವಾರು ದೈನಂದಿನ ಪೂರೈಕೆಯಂತೆ) ನೀರನ್ನು ಸರಬರಾಜು ಮಾಡಲು ಕ್ರಮವಹಿಸಲಾಗಿದೆ.
ಸಾರ್ವಜನಿಕರು ತಮ್ಮ ಮನೆಗಳಲ್ಲಿನ ಕೈತೋಟಗಳಿಗೆ, ವಾಹನ ತೊಳೆಯಲು, ಇನ್ನಿತರ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು ಹಾಗೂ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವಂತೆ ಮಹಾನಗರಪಾಲಿಕೆ ಆಯುಕ್ತರ ಪ್ರಕಟನೆ ತಿಳಿಸಿದೆ.





